ಬಂಟ್ವಾಳ: ಕಡಿತಗೊಂಡಿರುವ ನೀರಿನ ಪೈಪ್ಲೈನ್ ಸಂಪರ್ಕವನ್ನು ಮರು ಜೋಡಿಸಿಕೊಡುವಂತೆ ಆಗ್ರಹಿಸಿ ಪುರಸಭೆಯ ವಾರ್ಡ್ ಸಂಖ್ಯೆ 4 ರ ಕುಟುಂಬವೊಂದು ಬುಧವಾರ ಸಂಜೆ ಪುರಸಭೆ ಕಾರ್ಯಲಯದ ಮುಂದೆ ದಿಢೀರ್ ಧರಣಿ ಪ್ರತಿಭಟನೆ ನಡೆಸಿತು. ಮಂಗಳವಾರ ಬೆಳಿಗ್ಗಿನಿಂದ ನೀರಿನ ಪೈಪ್ಲೈನ್ ಕಡಿತಗೊಂಡು ನೀರಿಲ್ಲದೆ ಪರಿತಪಿಸಿದ ಕುಟುಂಬ ನೀರಿನ ಸಂಪರ್ಕ ಮರು ಜೋಡಿಸಿಕೊಡುವಂತೆ ಪುರಸಭೆಗೆ ದೂರು ನೀಡಿತ್ತು. ಆದರೆ ಬುಧವಾರ ಸಂಜೆಯವರೆಗೂ ಪುರಸಭೆಯಿಂದ ಸಕರಾತ್ಮಕ ಸ್ಪಂದನೆ ದೊರಕದೆ ಇದ್ದಾಗ ಕುಟುಂಬ ಸದಸ್ಯೆರೆಲ್ಲರೂ ಧರಣಿ ನಡೆಸಿ ಪುರಸಭಾ ಆಡಳಿತದ ವಿರುದ್ದ ತಮ್ಮ ಅಸಮಧಾನ ವ್ಯಕ್ತ ಪಡಿಸಿತು.


ಶೇಖರ್ ಶೆಟ್ಟಿ ಎಂಬವರ ಕುಟುಂಬವೇ ಪುರಸಭೆಯ ವಿರುದ್ದ ಧರಣಿ ನಡೆಸಿರುವುದು. 6 ವರ್ಷದ ಹಿಂದೆ ಶೇಖರ್ ಶೆಟ್ಟಿಯವರು ಪುರಸಭೆಯಿಂದ ನೀರಿನ ಸಂಪರ್ಕ ಪಡೆದುಕೊಂಡಿದ್ದು ಪೈಪ್ಲೈನ್ ಸ್ಥಳೀಯ ನಿವಾಸಿ ರಘುನಾಥ ಎಂಬವರ ಮನೆಯಂಗಳದ ಮೂಲಕ ಹಾದು ಹೋಗಿತ್ತು. ಮಂಗಳವಾಋ ಬೆಳಿಗ್ಗೆ ರಘುನಾಥ ವೈಷಮ್ಯದಿಂದ ನೀರಿನ ಪೈಪ್ಲೈನನ್ನು ತುಂಡರಿಸಿ ಶೇಖರ ಶೆಟ್ಟಿಯವರ ಮನೆಗೆ ನೀರು ಪೂರೈಕೆಯಾಗದಂತೆ ಅಡ್ಡಿಪಡಿಸಿದ್ದ. ನೀರಿಲ್ಲದೆ ಕುಟುಂಬ ಪರಿತಪಿಸಿರುವ ಬಗ್ಗೆ ವಾರ್ಡ್ ಸದಸ್ಯ ದೇವದಾಸ ಶೆಟ್ಟಿ ಮಂಗಳವಾರವೇ ಪುರಸಭೆಗೆ ಪೋನ್ ಮೂಲಕ ತಿಳಿಸಿದ್ದರು. ಬುಧವಾರ ಶೇಖರ ಶೆಟ್ಟಿಯವರು ಪುರಸಭೆಗೆ ಬಂದು ಲಿಖಿತ ಮನವಿಯನ್ನು ನೀಡಿದ್ದರು. ಅದರೂ ಪ್ರತ್ಯೇಕವಾಗಿ ಮರು ಸಂಪರ್ಕ ನೀಡಲು ಪುರಸಭೆ ಯಾವುದೇ ಕ್ರಮಕೈಗೊಳ್ಳದ ಕಾರಣ ಕುಟುಂಬ ಸದಸ್ಯರು ಪುರಸಭೆಯ ಮುಂದೆ ಧರಣಿ ನಡೆಸಿದರು. ಪುರಸಭೆ ನೀರಿನ ಸಮಪರ್ಕ ಒದಗಿಸುವವರೆಗೂ ಇಲ್ಲಿಯೇ ಬಿಡಾರ ಹೂಡವುದಾಗಿ ಪ್ರತಿಭಟನೆ ನಿರತರು ತಿಳಿಸಿದರು. ಶೇಖರ ಶೆಟ್ಟಿಯವರ ಪತ್ನಿ, ಇಬ್ಬರು ಮಕ್ಕಳು, ಅತ್ತೆ ಧರಣಿ ನಡೆಸಿದರು. ವಾರ್ಡ್ ಸದಸ್ಯ ದೇವದಾಸ ಶೆಟ್ಟಿ ಅವರಿಗೆ ಸಾಥ್ ನೀಡಿದರು.
