ನವದೆಹಲಿ: ಸತತ ಚುನಾವಣಾ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷದ ಉಪಾದ್ಯಕ್ಷ ರಾಹುಲ್ ಗಾಂಧಿ ಅವರು ಸೋಲಿನ ಕುರಿತು ಪಕ್ಷದ ಮಾರ್ಗದರ್ಶಿಗಳು ಮತ್ತು ಸಲಹೆಗಾರರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಎಲ್ಲ ವಿಭಾಗದ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ತೀರಾ ಕಳಪೆ ಪ್ರದರ್ಶನ ತೋರುತ್ತಿದ್ದು, ಪಕ್ಷದ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಾವೇಕೆ ಸೋಲುತ್ತಿದ್ದೇವೆ ಎಂದು ತಮ್ಮ ರಾಜಕೀಯ ಸಲಹೆಗಾರರನ್ನು ಪ್ರಶ್ನಿಸಿದ್ದಾರೆ. ಮೂಲಗಳ ಪ್ರಕಾರ ಪಕ್ಷದ ಸತತ ಸೋಲುಗಳ ಕುರಿತು ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಗುಲಾಂನಬಿ ಅಜಾದ್, ಅಂಬಿಕಾ ಸೋನಿ, ಮಣಿಶಂಕರ್ ಅಯ್ಯರ್, ಜೈಪಾಲ್ ರೆಡ್ಡಿ ಸೇರಿದಂತೆ ಪಕ್ಷದ ಇನ್ನಿತರೆ ಮುಖಂಡರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

rahul
ಉಪಚುನಾವಣೆಯನ್ನು ಹೊರತು ಪಡಿಸಿದರೆ ಆ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷ ತೀವ್ರ ಹಿನ್ನಡೆಯನ್ನು ಅನುಭವಿಸಿದ್ದು, ಸೋಲಿಗೆ ಕಾರಣವೇನು ಎಂದು ರಾಹುಲ್ ಸಭೆಯಲ್ಲಿ ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಸೋಲು ರಾಹುಲ್ ಗಾಂಧಿ ಅವರನ್ನು ಕಂಗೆಡಿಸಿದ್ದು, ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಪಕ್ಷವಾಗಿದರೂ ಕೂಡ, ಆ ರಾಜ್ಯದಲ್ಲಿ ಅತಿ ಕಡಿಮೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದ್ದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಸಭೆಯಲ್ಲಿ ರಾಹುಲ್ ಗಾಂಧಿ ಅವರು ಎತ್ತಿದ ಪ್ರಶ್ನೆಗಳಿಗೆ ಕಾಂಗ್ರೆಸ್ ಪಕ್ಷದ ಮಾರ್ಗದರ್ಶಕರು ಉತ್ತರಿಸಿದ್ದು, ಹಲವು ಆಸಕ್ತಿಕರ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಯುಪಿಎ ಸರ್ಕಾರದ ಮಾಜಿ ಸಚಿವರೋರ್ವರ ಪ್ರಕಾರ, ದೇಶದ ಜನತೆ ಓರ್ವ ಪ್ರಭಾವಿ ನಾಯಕನನ್ನು ಬಯಸುತ್ತಿದ್ದಾರೆ. ಅವರ ಬಯಕೆ ಸರಿಯೇ ಆದರೂ, ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರೆ ಸಕ್ರಿಯರಾಗಿ ಮತ ಹಾಕದಿದ್ದರೆ ಗೆಲ್ಲುವುದು ಹೇಗೆ..? ಎಂದು ಪ್ರಶ್ನಿಸಿದ್ದಾರೆ.
ಮತ್ತೋರ್ವ ಕಾಂಗ್ರೆಸ್ ಮುಖಂಡರೊಬ್ಬರು ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಜನತೆಗೆ ತಲುಪಿಸುವುದರಲ್ಲಿ ನಾವು ವಿಫಲವಾಗುತ್ತಿದ್ದು, ನಾವು ನಮ್ಮ ಸಿದ್ಧಾಂತ ಮತ್ತು ನೀತಿಗಳನ್ನು ಜನತೆಗೆ ಪರಿಣಾಮಕಾರಿಯಾಗಿ ತಲುಪಿಸುವುದಲ್ಲದೇ ಅದನ್ನು ಜನತೆ ಅರ್ಥ ಮಾಡಿಕೊಳ್ಳುವಂತೆ ಮಾಡಬೇಕು ಎಂದು ಹೇಳಿದ್ದಾರೆ. ಮತ್ತೋರ್ವ ಮುಖಂಡರು ನೆಹರೂ ಅವರ ಕಾಲದ ಜನಪ್ರಿಯ ಯೋಜನೆಗಳನ್ನು ನೆನಪಿಸುತ್ತಾ, ನೆಹರೂ ಅವರ ಖ್ಯಾತ ಯೋಜನೆಗಳಾದ ಉಚಿತ ಶಿಕ್ಷಣ, ಸಾಮುದಾಯಿಕ ಸೇವೆಗಳು, ಶುಚಿತ್ವ ರಕ್ಷಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಅಭಿವೃದ್ಧಿಗೊಳಿಸಬೇಕು ಮತ್ತು ಪ್ರಚಾರಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಪಕ್ಷದ ಸತತ ಸೋಲಿನಿಂದಾಗಿ ಕಂಗೆಟ್ಟಿರುವ ರಾಹುಲ್ ಗಾಂಧಿ ಅವರು, ಇದೀಗ ಹಿರಿಯರ ಮೊರೆ ಹೋಗಿದ್ದು, ಅವರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆಯುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *