ಮಂಗಳೂರು: ವಿಶಿಷ್ಟ ಚೇತನರಿಗೆ ಸರಕಾರ ನೀಡುತ್ತಿರುವ ಸಹಾಯ ಧನವು ಅಲ್ಪವಾಗಿದ್ದು, ಅದನ್ನು ದುಪ್ಪಟ್ಟುಗೊಳಿಸಲು ಎಲ್ಲರೂ ಸರಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ತಿಳಿಸಿದ್ದಾರೆ.
ರವಿವಾರ ದ.ಕ. ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ವತಿಯಿಂದ ನಗರದ ಪುರಭವನದಲ್ಲಿ ನಡೆದ ಸಂಘದ 26ನೇ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಶಿಷ್ಟಚೇತನರನ್ನು ಪ್ರೀತಿಯಿಂದ ಕಾಣಿರಿ, ಅವರ ಸಾಧನೆಗೆ ಬೆಂಬಲ, ಪ್ರೋತ್ಸಾಹ ನೀಡಿ. ವಿಶಿಷ್ಟ ಚೇತನರ ಬಾಹ್ಯ ನ್ಯೂನತೆಗಳನ್ನು ಗಮನಿಸದೆ ಸಾಧನೆಯಿಂದ ಅವರನ್ನು ಗುರುತಿಸಬೇಕು. ಸಾಮಾಜಿಕವಾಗಿ ಮುಂಚೂಣಿಗೆ ಬರಲು ಅವರಿಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಈ ವೇಳೆ ವಿಶಿಷ್ಟ ಚೇತನರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು, ಲಕ್ಕಿಡಿಪ್ ಬಹುಮಾನಗಳನ್ನು ವಿತರಿಸಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಶ್ರೀಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಕ್ ಉದ್ಘಾಟಿಸಿದರು. ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಪತಿ ಡಾ.ಎಂ.ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಸೇವಾ ಭಾರತಿಯ ಮ್ಯಾನೇಜಿಂಗ್ ಟ್ರಸ್ಟ್ ವಿನೋದ್ ಶೆಣೈ, ಸಹಕಾರಿ ಯೂನಿಯನ್ ದ.ಕ. ಅಧ್ಯಕ್ಷ ಹರೀಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
ಡಾ.ಮುರಲೀಧರ ನಾಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

