ಮೂಡಬಿದಿರೆ: ಸಿಡಿಲು ಬಡಿದು ಮಹಿಳೆಯೋರ್ವರು ಸಾವಿಗೀಡಾದ ಘಟನೆ ಮೂಡಬಿದಿರೆಸಮೀಪದ ನೆಲ್ಲಿಕಾರು ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಮೃತರನ್ನು ಮೂಡಬಿದ್ರೆ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ನಲ್ಲಪ್ಪ ರಾಥೋಡ್ ಪತ್ನಿ ಸಾವಿತ್ರಿ ರಾಥೋಡ್(೩೪) ಎಂದು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಸಿಡಿಲಿನ ಆರ್ಭಟದೊಂದಿಗೆ ಭಾರೀ ಮಳೆಯಾಗಿದ್ದು, ಮನೆಯಲ್ಲಿ ಮಲಗಿದ್ದ ಸಾವಿತ್ರಿ ಹಾಗೂ ಪತಿ ನಲ್ಲಪ್ಪರಿಗೆ ಸಿಡಿಲು ಬಡಿದು ಘಟನೆ ಸಂಭವಿಸಿದೆ. ಸಿಡಿಲು ಬಡಿದ ಪರಿಣಾಮ ಸಾವಿತ್ರಿ ಸ್ಥಳದಲ್ಲೇ ಸಾವನ್ನಪ್ಪಿದರೆ ನಲ್ಲಪ್ಪ ರಾಥೋಡ್ ಸ್ಪರ್ಶ ಜ್ಞಾನ ಕಳೆದುಕೊಂಡಿದ್ದಾರೆ. ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಬಿದ್ರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

