maxresdefault

ಬಂಟ್ವಾಳ: ತಾಲೂಕಿನ ಬಿ.ಸಿ.ರೋಡಿನಲ್ಲಿ ಹೈಟೆಕ್ ಬಸ್ಸ್ ನಿಲ್ದಾಣವಿದ್ದರೂ ಜನರಿಗೆ ಮಾತ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಹಲವಾರು ವರ್ಷಗಳಿಂದ ಬಸ್ ನಿಲ್ದಾಣದ ಆಸೆ ಬಸ್ ನಿಲ್ದಾಣದ ಉದ್ಘಾಟನೆಯ ಮೂಲಕ ಈಡೇರಿತಾದರೂ ಜನರಿಗೆ ಮಾತ್ರ ಉಪಯೋಗವಾಗುತ್ತಿಲ್ಲ. ಯಾಕೆಂದರೆ ಇಲ್ಲಿಗೆ ಕೇವಲ ಕೆಲವೇ ಬಸ್‌ಗಳು ಮತ್ತು ಪುತ್ತೂರಿನಿಂದ ಮಂಗಳೂರಿಗೆ ಬರುವ ಬಸ್‌ಗಳು ಮಾತ್ರ ಬರುತ್ತವೆ. ಇನ್ನುಳಿದಂತೆ ಮಂಗಳುರಿನಿಂದ ಬರುವ ಯಾವುದೇ ಬಸ್‌ಗಳು ನಿಲ್ದಾಣವನ್ನು ಪ್ರವೇಶ ಮಾಡದೇ ಪ್ರಯಾಣಿಕರು ತ್ರಾಸಪಡುವಂತಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಬಿ.ಸಿ.ರೋಡಿನ ಭವ್ಯ, ಸುಸಜ್ಜಿತ, ಏರ್‌ಪೋರ್ಟ್‌ನಂತಿದೆ ಎಂದೇ ಬಣ್ಣಿಸಲಾದ ಬಣ್ಣಬಣ್ಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕಟ್ಟಡ ಉದ್ಘಾಟನೆಗೊಂಡಿತ್ತು.ಈ ೭ ತಿಂಗಳಲ್ಲಿ ಕಾಸರಗೋಡಿಗೆ ಬಿ.ಸಿ.ರೋಡಿನಿಂದ ಬಸ್ ಸರ್ವೀಸ್ ಹಾಗೂ ಬಿ.ಸಿ.ರೋಡ್ ನಿಂದ ರಾತ್ರಿ ಬೆಂಗಳೂರಿಗೆ ಸ್ಲೀಪರ್ ಸರ್ವೀಸ್ ಬಸ್‌ಗಳು ಆರಂಭಗೊಂಡದ್ದಷ್ಟೇ ಸಾಧನೆ. ಉಳಿದಂತೆ ಪ್ರಯಾಣಕರು ಬಿಡಿ, ಐರಾವತ, ರಾಜಹಂಸ ಬಸ್‌ಗಳೂ ಒಳಗೆ ಪ್ರವೇಶಿಸುವುದಿಲ್ಲ. ಮಂಗಳೂರಿಗೆ ತೆರಳುವ ಸ್ಥಳೀಯ ಬಸ್‌ಗಳು ಬಂದು ಹೋಗುವ ಶಾಸ್ತ್ರವನ್ನಷ್ಟೇ ಮಾಡುತ್ತವೆ. ಅಷ್ಟರಮಟ್ಟಿಗೆ ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಉಪಯೋಗಶೂನ್ಯ. ಇದು ನನ್ನ ಅವಧಿಯಲ್ಲಿ ನಡೆದದ್ದು ಎಂದು ಹೇಳಲು ಒಂದು ರಾಜಕೀಯ ಪಕ್ಷ, ಈ ಬಸ್ ನಿಲ್ದಾಣ ಇಲ್ಲಿಗೆ ಬರಲು ನಾವೇ ಕಾರಣ ಎಂದು ಹೇಳಲು ಇನ್ನೊಂದು ರಾಜಕೀಯ ಪಕ್ಷ ಪೈಪೋಟಿ ನಡೆಸಿವೆಯೇ ಹೊರತು, ಜನರಿಗೆ ಇದರಿಂದ ಏನಾದರೂ ಉಪಯೋಗವಾಗಿದೆಯೇ ಎಂದು ಯೋಚಿಸಲು ಪುರುಸೊತ್ತು ಮಾಡಿಲ್ಲ.

ಬಿಸಿಲು, ಮಳೆಗೇ ನಿಲ್ಲುತ್ತಾರೆ: ಮಳೆಯೇ ಇರಲಿ, ಬಿಸಿಲೇ ಇರಲಿ, ಚಳಿಯೇ ಇರಲಿ, ಬಿ.ಸಿ.ರೋಡಿನ ಪ್ರಯಾಣಿಕರಿಗೆ ಸರ್ವೀಸ್ ರಸ್ತೆಯ ಆರಂಭದ ಭಾಗ, ಸರ್ವೀಸ್ ರಸ್ತೆಯ ಅಂತ್ಯದ ಭಾಗ, ಫ್ಲೈಓವರ್ ಪಕ್ಕದ ಅಂಗಡಿ ಬುಡದಲ್ಲಿ ಮಂಗಳೂರಿಗೆ ತೆರಳುವ ಬಸ್‌ಗಳನ್ನು ಕಾಯುವುದೇ ಇಷ್ಟವೋ ಅಥವಾ ಮಂಗಳೂರಿಗೆ ತೆರಳುವ ಬಸ್‌ಗಳು ಅಲ್ಲೇ ಬಲವಂತವಾಗಿ ನಿಲ್ಲುತ್ತವೆಯೋ ಎಂಬುದು ಕೋಳಿಯಿಂದ ಮೊಟ್ಟೆ ಹೊರಗೆ ಬಂತೋ ಅಥವಾ ಮೊಟ್ಟೆಯಿಂದ ಕೋಳಿ ಬಂತೋ ಎಂಬಷ್ಟೇ ಜಟಿಲ. ಆದರೆ ಪ್ರಯಾಣಿಕರು ಈ ಜಾಗದಲ್ಲಿ ನಿಲ್ಲದಂತೆ ಅಥವಾ ಬಸ್‌ಗಳು ಅಲ್ಲಿ ನಿಲ್ಲದಂತೆ ಮಾಡಲು ಆಡಳಿತಕ್ಕೆ ಸಾಧ್ಯವಿದೆ. ಅದಕ್ಕೊಂದು ಸೂಕ್ತ ಜಾಗವನ್ನೂ ಕಲ್ಪಿಸಲು ಅವಕಾಶವಿದೆ. ಆದರೆ ಎಲ್ಲವೂ ಜಾಣಕುರುಡು.

ಕೆಎಸ್ಸಾರ್ಟಿಸಿ ಬಸ್‌ಗಳು ನಿಲ್ದಾಣ ಪ್ರವೇಶಿಸುವ ಹೊತ್ತಿಗೆ ಪ್ರಯಾಣಿಕರು ಬಸ್‌ಗಳ ಸೀಟುಗಳನ್ನು ಅಲಂಕರಿಸಿ ಆಗಿರುತ್ತದೆ. ನಿಲ್ದಾಣದಲ್ಲಿ ಟಿಸಿಯ ಎಂಟ್ರಿಗಷ್ಟೇ ಅವಕಾಶ. ಖಾಸಗಿ ಬಸ್‌ಗಳು ಕಾಂಟ್ರಾಕ್ಟ್ ಕ್ಯಾರೇಜ್ ಆದ ಕಾರಣ ಅವರು ನಿಂತಲ್ಲೇ ನಿಲ್ದಾಣ. ಯಾವುದೇ ಕಡಿವಾಣ ಅವರಿಗಿಲ್ಲ.

 

By suddi9

Leave a Reply

Your email address will not be published. Required fields are marked *