ಪುತ್ತೂರು: ಧರ್ಮಗಳ ನಡುವೆ ಸಾಮರಸ್ಯ ಕದಡುವ ರೀತಿಯಲ್ಲಿ ಬರಹವನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಶಾಂತಿ ಕದಡಲು ಯತ್ನಿಸಿದ್ದ ಆರೋಪದಲ್ಲಿ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಕೊಡಗು ಜಿಲ್ಲೆ ಮಡಿಕೇರಿಯ ಕೊಯಿನಾಡು ಗ್ರಾಮದ ಮಿಥುನ್ ಕೆಬಿ(೨೮) ಎಂದು ಗುರುತಿಸಲಾಗಿದೆ.
ಈತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೆಟ್ಟಣಿಗೆ ಮುಡ್ನೂರು ಗೋಲಿತ್ತಡಿ ಎಂಬಲ್ಲಿ ಮೇ ೨೦ರಂದು ಕಾಸರಗೋಡು ಮೂಲದ ರಾಜೇಂದ್ರ ಎ.ಬಿ. ಎಂಬವರು ಚಲಾಯಿಸುತ್ತಿದ್ದ ಬಸ್ಸಿಗೆ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರ ರಸ್ತೆಗೆ ಬಿದ್ದು ಗಾಯವಾಗಿತ್ತು. ಬಸ್ಸಿನ ನಿರ್ವಾಹಕ ನಾಗರಾಜ ಕೆ(೨೭) ಎಂಬವರು ಸವಾರರನ್ನು ಆಸ್ಪತ್ರೆಗೆ ದಾಖಲಿಸಲು ವಾಹನಕ್ಕಾಗಿ ಕಾಯುತ್ತಿದ್ದರು. ಈ ಸಂದರ್ಭ ಗಾಳಿಮುಖದ ಮುನಾಫ್, ನಿಝಾದ್ ಹಾಗೂ ಇತರ ಇಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆಂದು, ಆರೋಪಿಗಳ ಪೈಕಿ ಮುನಾಫ್ ಜೀವ ಬೆದರಿಕೆ ಒಡ್ಡಿದ್ದಾನೆಂದು ಆರೋಪಿಸಲಾಗಿತ್ತು.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಆರೋಪಿಗಳಾದ ಕಾಸರಗೋಡು ನಿವಾಸಿಗಳಾದ ಮುನಾಫ್, ನಿಝಾದ್, ನೆಟ್ಟಣಿಗೆ ಮುಡ್ನೂರಿನ ಶಾಹುಲ್ ಹಮೀದ್ ಎಂಬವರನ್ನು ಮೇ ೨೨ರಂದು ಪೊಲೀಸಲು ಗಾಳಿಮುಖದಲ್ಲಿ ದಸ್ತಗಿರಿ ಮಾಡಿದ್ದರು. ಇದೇ ಘಟನೆಗೆ ಸಂಬಂಧಿಸಿ ಮೇ ೨೧ರಂದು ನೆಟ್ಟಣಿಗೆ ಮುಡ್ನೂರು ಗ್ರಾಮದ ಪರಿಸರ ಜನರ ಮೊಬೈಲ್‌ನ ವಾಟ್ಸ್‌ಆಪ್‌ನಲ್ಲಿ ‘ಬ್ರೇಕಿಂಗ್ ನ್ಯೂಸ್ ಗಾಳಿಮುಖ ಪರಿಸರದಲ್ಲಿ ಮತಾಂಧರ ಅಟ್ಟಹಾಸ’ ಎಂಬ ಶೀರ್ಷಿಕೆಯಡಿ ‘ಪುತ್ತೂರು ತಾಲೂಕು ಗಾಳಿಮುಖ ಗೋಳಿತ್ತಡಿ ಪರಿಸರದ ಕೆಲವು ಮತಾಂಧರಿಂದ ಹಿಂಜಾವೇ ಈಶ್ವರ ಮಂಗಲ ಕಾರ್ಯಕರ್ತ ನಾಗರಾಜ್ ಕಲ್ಲಾಜೆ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು’ ಎಂಬುದಾಗಿ ಸಂದೇಶ ಹರಿದಾಡುತ್ತಿದ್ದವು. ಈ ಬಗ್ಗೆ ವಿಚಾರ ತಿಳಿದ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಮಿಥುನ್ ಕೆಬಿ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
