Mattar-R

ಉಡುಪಿ: ಮೋದಿಯವರ ಉಡುಪಿ ಭೇಟಿ ಹಾಗೂ ಚುನಾವಣಾ ಪ್ರಚಾರ ಭಾಷಣ ಜಿಲ್ಲೆಯಾದ್ಯಂತ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸ್ಫೂರ್ತಿ ತುಂಬಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮನೆ – ಮನೆ ಭೇಟಿಯ ಮಹಾಸಂಪರ್ಕ ಅಭಿಯಾನವು ನಿರಂತರವಾಗಿ ನಡೆಯುತ್ತಿದ್ದು, ಉಡುಪಿ, ಕಾಪು, ಕಾರ್ಕಳ, ಕುಂದಾಪುರ, ಬೈಂದೂರು ಕ್ಷೇತ್ರಗಳಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಉತ್ಸಾಹದಿಂದ ಗೆಲುವಿನ ಗುರಿಯೊಂದಿಗೆ ಪ್ರಚಾರ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಮೋದಿ ಪ್ರಚಾರ ಸಭೆಯಲ್ಲಿ ಸುಮಾರು 1 ಲಕ್ಷಕ್ಕೂ ಮಿಕ್ಕಿ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿ ದಾಖಲೆ ಸೃಷ್ಟಿಸಿರುವುದು ಜಿಲ್ಲೆಯಾದ್ಯಂತ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಸಂಕೇತವಾಗಿದೆ ಎಂದರು.

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದಲ್ಲಿ ಯಾವುದೇ ಜನಪರ ಅಭಿವೃದ್ಧಿಯ ಚಿಂತನೆಗಳಿಲ್ಲ. ಕೀಳುಮಟ್ಟದ ವೋಟ್‌ ಬ್ಯಾಂಕ್‌ ರಾಜಕಾರಣ, ಭ್ರಷ್ಟಾಚಾರ, ಹಗರಣಗಳ ಸರಮಾಲೆ, ಧರ್ಮ ವಿಭಜನೆ, ಒಂದೇ ವರ್ಗದ ತುಷ್ಟೀಕರಣ, ರಾಜಕೀಯ ಹತ್ಯೆಗಳು, ಹಿಂದೂ ವಿರೋಧಿ ನೀತಿ, ದುರಾಡಳಿತ ಗಳಿಂದ ನಲುಗಿ ಹೋಗಿರುವ ರಾಜ್ಯಕ್ಕೆ ಬಿಜೆಪಿಯೊಂದೇ ಪರಿಹಾರ ಎಂದವರು, ಮಿಷನ್‌ 150ರ ಗುರಿ ತಲುಪಲು ಜಿಲ್ಲೆಯ ಐದೂ ಬಿಜೆಪಿ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸುವ ಜವಾಬ್ದಾರಿ ನಮಗಿದೆ. “ನನ್ನ ಬೂತ್‌ಗೆ ನಾನೇ ಅಭ್ಯರ್ಥಿ’ ತತ್ವದೊಂದಿಗೆ ಜಿಲ್ಲೆಯ ಎಲ್ಲ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ ಎಂದು ಹೆಗ್ಡೆ ಹೇಳಿದರು.

ಜಿಲ್ಲಾ ಪ್ರ.ಕಾರ್ಯದರ್ಶಿ ಕುತ್ಯಾರು ನವೀನ್‌ ಶೆಟ್ಟಿ, ಕುಯಿಲಾಡಿ ಸುರೇಶ್‌ ನಾಯಕ್‌, ಯಶಪಾಲ್‌ ಸುವರ್ಣ, ಸಂಧ್ಯಾ ರಮೇಶ್‌, ಜಿಲ್ಲಾ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಶೆಟ್ಟಿ ಕಪ್ಪೆಟ್ಟು, ಕೋಶಾಧಿಕಾರಿ ರವಿ ಅಮೀನ್‌, ಜಿಲ್ಲಾ ವಕ್ತಾರ ಕಟಪಾಡಿ ಶಂಕರ ಪೂಜಾರಿ, ಸಹ ವಕ್ತಾರ ಶಿವಕುಮಾರ್‌ ಅಂಬಲಪಾಡಿ ಮೊದಲಾದವರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *