ನವದೆಹಲಿ: ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ ಪಿಡಿಪಿ ಪಕ್ಷ ಮುಖ್ಯಸ್ಥನಾಗಿದ್ದ ಅಬ್ದುಲ್ ನಾಸೀರ್ ಮದನಿಗೆ ಕಟ್ಟುನಿಟ್ಟಿನ ಷರತ್ತಿನ ಮೂಲಕ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಿದೆ. ಮದನಿಗೆ ಡಯಾಬಿಟೀಸ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆರೋಗ್ಯದ ಸ್ಥಿರತೆಗೆ ಕಾಲಾವಕಾಶ ಬೇಕೆಂದ ವಕೀಲರು ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಮೂರ್ತಿ. ಛಲಮೇಶ್ವರ ಪೀಠ ಈ ಆದೇಶ ಹೊರಡಿಸಿದೆ. ವಿಚಾರಣೆ ವೇಳೆ, ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರಾ? ಎಂದು ಪೀಠ ಪ್ರಶ್ನಿಸಿತ್ತು. ಉಲ್ಲಂಘಿಸಿಲ್ಲದಿದ್ದರೆ ಜಾಮೀನು ಅವಧಿ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದೆ.

ಮದನಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನ್ಯಾಯಾಪೀಠ ಶಿಫಾರಸ್ಸು ಮಾಡಿದೆ. ಆರೋಪಿಯು ಜಾಮೀನು ಅವಧಿಯಲ್ಲಿ ಬೆಂಗಳೂರು ಬಿಟ್ಟು ತೆರಳಬಾರದು, ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು ಮತ್ತು ಕರ್ನಾಟಕ ಸರ್ಕಾರ ಆರೋಪಿ ಮೇಲೆ ನಿಗಾ ಇಡಬೇಕು ಎಂಬ ಷರತ್ತುಗಳನ್ನು ವಿಧಿಸಿತ್ತು. ಹಿಂದೆ ವಿಧಿಸಿದ್ದ ಷರತ್ತುಗಳು ಈಗಲೂ ಅನ್ವಯಿಸುತ್ತವೆ ಎಂದು ನ್ಯಾಯಾಪೀಠ ಹೇಳಿದೆ.
2008ರಲ್ಲಿ ನಡೆದ ಬೆಂಗಳೂರು ಸರಣಿ ಸ್ಫೋಟದಲ್ಲಿ ಒಬ್ಬ ಮಹಿಳೆ ಮೃತಪಟ್ಟು ಹಲವರು ಗಾಯಗೊಂಡಿದ್ದರು. ನಾಲ್ಕು ವರ್ಷಗಳಿಂದ ಬೆಂಗಳೂರು ಜೈಲಿನಲ್ಲಿರುವ ಅಬ್ದುಲ್ ಮದನಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಆತನಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಮದನಿಗೆ ಇತ್ತೀಚೆಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
