ಬಂಟ್ವಾಳ; ತಾಲೂಕಿನ ಹಲವು ವರ್ಷಗಳ ಬೇಡಿಕೆಯಾಗಿರುವ ಮಿನಿವಿಧಾನಸೌಧದ ಕನಸು ಕೊನೆಗೂ ಈಡೇರುವ ಕಾಲ ಬಂದಿದೆ. ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಈ ನಿಟ್ಟಿನಲ್ಲಿ ಹೆಚ್ಚಿನ ಮುತುರ್ವಜಿ ವಹಿಸಿದ್ದು, ನಿರೀಕ್ಷೆಯಂತೆ ಎಲ್ಲವೂ ನಡೆದರೆ, ಮುಂದಿನ ಮೂರು ವರ್ಷಗಳ ಒಳಗಾಗಿ ತಾಲೂಕಿನ ಕೇಂದ್ರಭಾಗವಾದ ಬಿ.ಸಿ.ರೋಡಿನಲ್ಲಿ ಮಿನಿವಿಧಾನ ಸೌಧ ಎದ್ದುನಿಲ್ಲಲಿದೆ.

ಮಿನಿವಿಧಾನ ಸೌಧಕ್ಕಾಗಿ ಈಗಾಗಲೇ 5 ಕೋಟಿ ರೂ ಮಂಜೂರಾಗಿದ್ದು. ವಾರದ ಒಳಗಾಗಿ ಟೆಂಡರ್ ಪ್ರಕ್ರಿಯೆಯೂ ನಡೆಯಲಿದೆ. ಮಿನಿವಿಧಾನ ಸೌಧಕ್ಕಾಗಿ ಈಗಿನ ತಾಲೂಕು ಕಛೇರಿ ಇರುವ 90 ಸೆಂಟ್ಸ್ ಜಮೀನು ಅನ್ನು ನಿಗದಿಪಡಿಸಲಾಗಿದ್ದು, ತಾಲೂಕು ಕಛೇರಿಯನ್ನು ಕೆಡವಿ ಅಲ್ಲಿ ಮಿನಿವಿಧಾನ ಸೌಧ ನಿರ್ಮಾಣಗೊಳ್ಳಬೇಕಿದೆ. ಇದಕ್ಕೆ ಪೂರಕವಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಸ್ಥಳಪರಿಶೀಲನೆ ನಡೆಸಿದ್ದು, ಮಿನಿವಿಧಾನ ಸೌಧ ಕಾಮಗಾರಿ ಆರಂಭಿಸಲು ಅನುವು ಮಾಡಿಕೊಡುವ ಇರಾದೆಯಿಂದ ತಾಲೂಕು ಕಛೇರಿಯನ್ನು, ಕಡತಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.
ಈ ನಿಟ್ಟಿನಲ್ಲಿ ತಾಲೂಕು ತಹಶೀಲ್ದಾರ್ ಮಲ್ಲೇಸ್ವಾಮಿ ಯವರು ಖಾಸಗಿಯವರ ಸೊತ್ತಾಗಿರುವ ಹಳೆ ಎಲ್ಐಸಿ ಕಟ್ಟಡದಲ್ಲಿ ತಾಲೂಕು ಕಛೇರಿಯನ್ನು ನಿರ್ವಹಿಸಲು ಸಿದ್ದತೆ ನಡೆಸಿದ್ದಾರೆ. ಸದ್ರಿ ಕಟ್ಟಡದಲ್ಲಿ ಕಡತಗಳ ಭದ್ರತೆ, ಪೀಠೋಪಕರಣಗಳ ಜೋಡಣೆಯ ವ್ಯವಸ್ಥೆಗಳಾದ ಬಳಿಕ ಬಂಟ್ವಾಳ ತಾಲೂಕು ಕಛೇರಿ ಬಿ.ಸಿ.ರೋಡಿನ ಹೃದಯ ಭಾಗದಲ್ಲೇ ಇರುವ ಹಳೆ ಎಲ್ಐ ಸಿ ಯ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.
ಶೀಘ್ರವೇ ಶಿಲಾನ್ಯಾಸ;
ಮುಂದಿನ ವಿಧಾನ ಸೌಧ ಚುನಾವಣೆಗೆ ಮುನ್ನ ಬಂಟ್ವಾಳದ ಮಿನಿವಿಧಾನ ಸೌಧ ನಿಮರ್ಾಣಗೊಳ್ಳಲೇ ಬೇಕು ಎನ್ನುವ ಸಚಿವ ರೈ ಯವರ ಛಲ ಅಧಿಕಾರಿ ವಲಯದಲ್ಲಿ ಚುರುಕು ಮುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಮುತುರ್ವಜಿ ವಹಿಸಿ ಕಾರ್ಯಪ್ರವೃತ್ತರಾಗಿದ್ದು, ಮಿನಿವಿಧಾನ ಸೌಧದ ನೀಲನಕ್ಷೆ ಸಿದ್ದಗೊಂಡಿದೆ. ಟೆಂಡರ್ ಪ್ರಕ್ರಿಯೆ ನಡೆದ ಬೆನ್ನಲ್ಲೇ ಮಿನಿವಿಧಾನ ಸೌಧದ ಶೀಲಾನ್ಯಾಸ ನೆರವೇರುವ ಸಾಧ್ಯತೆ ಇದೆ.
ಎಲ್ಲಾ ಇಲಾಖೆಗಳು ಒಂದೇ ಸೂರಿನಲ್ಲಿ..
ಮಿನಿವಿಧಾನ ಸೌಧ ನಿರ್ಮಾಣಗೊಂಡ ಬಳಿಕ ತಾಲೂಕಿನ ಎಲ್ಲಾ ಇಲಾಖೆಗಳ ಕಛೇರಿಗಳು ಇಂದೇ ಸೂರಿನಲ್ಲಿ ಕಾರ್ಯ ನಿರ್ವಹಿಸಲಿದೆ. ನಾಗರೀಕರಿಗೆ ಚಿಕ್ಕ ಚಿಕ್ಕ ವಿಚಾರಗಳಿಗೂ ಎಲ್ಲೆಂದರಲ್ಲಿ ಚದುರಿರುವ ಕಛೇರಿಗಳ ಭೇಟಿ, ಮಿನಿ ವಿಧಾನ ಸೌಧ ನಿರ್ಮಾಣದ ಬಳಿಕ ಸುಲಭ ಸಾಧ್ಯವಾಗಲಿದೆ.
