ಮಂಗಳೂರು: ಕೊಲೆ ಯತ್ನ ಮತ್ತು ಗಾಂಜಾ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ರೌಡಿ ನಿಗ್ರಹ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಮುಳ್ಳುಗುಡ್ಡೆ ನಿವಾಸಿ ಇಮ್ತಿಯಾಜ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಈ ಹಿಂದೆ ಕೊಣಾಜೆ ಠಾಣಾ ವ್ಯಾಪ್ತಿಯ ಕೇರಳ ಗಡಿ ಪ್ರದೇಶ ನೆತ್ತಿಲಪದವು ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿಯ ಮೇರೆಗೆ ರೌಡಿನಿಗ್ರಹದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ನೆತ್ತಿಲ ಪದವು ಕಲ್ಲರಕೋಡಿ ಎಂಬಲ್ಲಿ ಸುಮಾರು 10.250 ಕೆ.ಜಿ. ಗಾಂಜಾ ಮತ್ತು ಕೆ.ಎ.19-ಕ್ಯೂ -1625 ನಂಬ್ರದ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈತ ಈ ಹಿಂದೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಳ್ಳುಗುಡ್ಡೆ ಎಂಬಲ್ಲಿ ಪಚ್ಚಿಲ ಅಝೀಝ್ ಎಂಬಾತನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿ ತಲೆಮರೆಸಿಕೊಂಡಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ವಿರುದ್ಧ ಉಳ್ಳಾಲ ಠಾಣೆ, ಕೊಣಾಜೆ ಠಾಣೆ ಹಾಗೂ ಕಾವೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

