ಉಡುಪಿ: ಕುಂದಾಪುರದ ಲಾಡ್ಜೊಂದರಲ್ಲಿ ನಡೆದಿದ್ದ ವೃದ್ಧೆಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಜತೆ 50 ಸಾವಿರ ರೂ. ದಂಡವನ್ನೂ ವಿಧಿಸಿ ಆದೇಶ ಹೊರಡಿಸಿದೆ.
ಗುಜರಾತ್ ಮೂಲದ ಅಝರ್ ಖಾನ್ ಅಲಿಯಾಸ್ ಅಜಯ್ ಬಾಬು ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿ ಎಂದು ಗುರುತಿಸಲಾಗಿದೆ.
ಅಪರಾಧಿಗೆ ಶಿಕ್ಷೆ ವಿಧಿಸಿ ಕುಂದಾಪುರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ತೀರ್ಪು ನೀಡಿದ್ದಾರೆ. ಜತೆಗೆ ಇನ್ನಿತರ ಪ್ರಕರಣಗಳಿಗೂ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
2015ರ ಏಪ್ರಿಲ್ 15ರಂದು ಕುಂದಾಪುರದಲ್ಲಿ ಘಟನೆ ನಡೆದಿತ್ತು. ಅಪರಾಧಿಯು ಗಂಗೊಳ್ಳಿಯ ಲಲಿತಾ ದೇವಾಡಿಗ ಎಂಬವರನ್ನು ಹತ್ಯೆಗೈದಿದ್ದ. ಮಗಳ ಪ್ರೀತಿ ವಿಚಾರದಲ್ಲಿ ಲಲಿತಾ ಅವರ ಕೊಲೆಯಾಗಿತ್ತು. ಈಕೆಯನ್ನು ನಂಬಿಸಿ ಲಾಡ್ಜಿಗೆ ಕರೆಸಿಕೊಂಡಿದ್ದ ಅಜರ್ ಬಳಿಕ ಕುತ್ತಿಗೆಗೆ ವಯರ್ ಬಿಗಿದು ಕೊಂದಿದ್ದ. ಕೊಲೆ ನಂತರ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ತಲೆಮರೆಸಿಕೊಂಡಿದ್ದ ಆರೋಪಿ ಅಝರನನ್ನು ಮುಂಬೈಯಲ್ಲಿ ಪೊಲೀಸರು ಬಂಧಿಸಿದ್ದರು.
ಪ್ರಕರಣದಲ್ಲಿ ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು.


