
ಉಡುಪಿ : ವಿಶೇಷ ನ್ಯಾಯಾಲಯದಿಂದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ಮಾಹಿತಿ ನೀಡಲು ವಿಫಲರಾಗಿದ್ದರಿಂದ ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.
ಬೆಂಗಳೂರಿನಲ್ಲಿರುವ ಭೂ ಒತ್ತುವರಿ ಕುರಿತ ವಿಶೇಷ ನ್ಯಾಯಾಲಯ ಬಂಧನದ ಆದೇಶ ನೀಡಿದೆ. ಸರ್ಕಾರಿ ಕೆರೆ ಸೇರಿದಂತೆ ಭೂ ಒತ್ತುವರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಡೆದ ಸರ್ಕಾರಿ ಭೂಮಿಗಳ ಒತ್ತುವರಿ ಮತ್ತು ಅದರ ತೆರವಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಕೋರ್ಟ್ ಸೂಚಿಸಿತ್ತು.
ಆದರೆ ಡಿಸಿ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿ ಮಾಹಿತಿ ನೀಡಿರಲಿಲ್ಲ. ಕೆರೆ ಸರ್ಕಾರಿ ಭೂಮಿ, ರಸ್ತೆಯ ಇಕ್ಕೆಲ್ಲ ಒತ್ತುವರಿ ಬಗ್ಗೆ ವಿಶೇಷ ಭೂ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಕೇಳಿತ್ತು. ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಉತ್ತರ ನೀಡದ ಹಿನ್ನಲೆಯಲ್ಲಿ ಬಂಧನದ ವಾರೆಂಟ್ ಹೊರಡಿಸಿದೆ.
