ಮಂಗಳೂರು: ವಿಧಾನ ಸಭೆ ಚುನಾವಣೆಯಲ್ಲಿ ಮೇಯರ್ ಕವಿತಾ ಸನಿಲ್ ರಿಗೆ ಟಿಕೆಟ್ ನೀಡುವ ಬಗ್ಗೆ ಸಾರ್ವಜನಿಕವಾಗಿ ಕಾಂಗ್ರೆಸ್ ಹಾಲಿ ಶಾಸಕರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ನಗರದ ಹೊರವಲಯದ ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದ ನಾಮಫಲಕದ ತಾರಾಲಯ ಉದ್ಘಾಟನೆಯ ವೇಳೆ ಗುರುವಾರ ನಡೆದಿದೆ.
ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಕಾಂಗ್ರಸ್ ಮುಖಂಡರು ಹಾಗೂ ಕಾರ್ಯಕರ್ತರು ಜತೆಗಿದ್ದ ವೇಳೆ “ಮೇಯರ್ ಕವಿತಾ ಸನಿಲ್ ಅವರ ಅಧಿಕಾರ ಮುಗಿಯುತ್ತಿದ್ದು, ಮುಂದೆ ಏನು ಮಾಡ್ತೀರಾ” ಅಂತ ನೆರೆದಿದ್ದ ಕಾಂಗ್ರಸ್ ಮುಂಖಡರು ಕೇಳಿದಾಗ. ಇದಕ್ಕೆ ನಗು ಮುಖದಿಂದ ಪ್ರಕ್ರಿಯಿಸಿದ್ದ ಶಾಸಕ ಮೊಯಿದ್ದೀನ್ ಬಾವಾ, ವಿಧಾನ ಸಭೆ ಚುನಾವಣೆಯಲ್ಲಿ ಕವಿತಾ ಅವರು ಮೂಡಬಿದಿರೆಯ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಶಾಸಕ ಅಭಯಚಂದ್ರ ಜೈನ್ “ಆಕಾಂಕ್ಷಿ ನಿನ್ನ ಅಪ್ಪ” ಎಂದು ಏಕವಚನದಲ್ಲಿ ಮೊಯಿದ್ದೀನ್ ಬಾವಾರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕೋಪಗೊಂಡ ಬಾವಾ ಅವರು “ ಆಕಾಂಕ್ಷಿ ನನ್ನ ಅಪ್ಪ ಅಲ್ಲ. ನಿನ್ನ ಅಪ್ಪ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಇದರಿಂದ ಪರಸ್ಪರ ಸಿಟ್ಟಿಗೆದ್ದು ಮಾತಿನ ಚಕಮಕಿ ನಡೆಸಿ ಕೈ ಮಿಗಿಲಾಯಿಸುವ ಹಂತಕ್ಕೆ ತಲುಪಿದ್ದರು. ಇದರಿಂದ ಎಚ್ಚೆತ್ತ ಬೆಂಬಲಿಗರು ಇಬ್ಬರನ್ನು ಪರಸ್ಪರ ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.
ಅಭಯ ಚಂದ್ರ ಜೈನ್ ಈ ಹಿಂದೆ ಹಲವು ಬಾರಿ ಸಾರ್ವಜನಿಕವಾಗಿ ರಾಜಕೀಯ ಮುಖಂಡರೊಂದಿಗೆ ಮುನಿಸಿಕೊಂಡಿದ್ದು, ಎರಡು ಮೂರು ತಿಂಗಳ ಹಿಂದೆ ಮುಖ್ಯಮಂತ್ರಿ ಭೇಟಿ ನೀಡಿದ ಸಂದರ್ಭದಲ್ಲೂ ಅವರು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರೊಂದಿಗಿನ ಮನಸ್ತಾಪವನ್ನು ಸಾರ್ವಜನಿಕವಾಗಿಯೇ ಹೊರಗೆಡವಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟಿನಲ್ಲಿ ಕರಾವಳಿಯ ಕೈ ಮುಖಂಡರು ಟಿಕೆಟ್ ಆಕಾಂಕ್ಷಿಯಾಗಿದ್ದು, ಇದಕ್ಕಾಗಿ ತಳಮಟ್ಟಕ್ಕೂ ಇಳಿಯಲು ಸಿದ್ಧರಿದ್ದಾರೆ ಎಂಬುದನ್ನು ನಾವು ಇಲ್ಲಿ ಮನಗಾನಬಹುದು.


