ಹೆಬ್ರಿ ತಾಲ್ಲೂಕು ಮಿನಿ ವಿಧಾನಸೌಧಕ್ಕೆ 5 ಕೋಟಿ : ಕಾಗೋಡು ತಿಮ್ಮಪ್ಪ
ಹೆಬ್ರಿ : ಹೆಬ್ರಿ ತಾಲ್ಲೂಕು ಭಾಗ್ಯ ದೊರೆತಿರುವುದು, ತಾಲ್ಲೂಕಿನ ಉದ್ಘಾಟನೆ ಮಾಡುವುದು ನನ್ನ ಸೌಭಾಗ್ಯ. ಶೀಘ್ರವಾಗಿ ಶಾಸಕರು ಪ್ರಸ್ತಾವನೆ ಕಳುಹಿಸಿದರೆ ಹೆಬ್ರಿ ತಾಲ್ಲೂಕು ಮಿನಿ ವಿಧಾನಸೌಧಕ್ಕೆ 5 ಕೋಟಿ ರೂಪಾಯಿ ಮಂಜೂರು ಗೊಳಿಸುತ್ತೇನೆ. ಜಿಲ್ಲಾಧಿಕಾರಿಗೂ ಕೂಡಲೇ ಪ್ರಸ್ತಾವನೆ ಕಳುಹಿಸಲು ಸೂಚಿಸಿದ್ದೇನೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಅವರು ಶನಿವಾರ ಹೆಬ್ರಿ ನೂತನ ತಾಲ್ಲೂಕನ್ನು ಸಮುದಾಯ ಆರೋಗ್ಯ ಕೇಂದ್ರದ ಹಳೇಯ ಕಟ್ಟಡದಲ್ಲಿ ಲೋಕಾರ್ಪಣೆ ಮಾಡಿ ಬಳಿಕ ಹೆಬ್ರಿ ಮಾದರಿ ಶಾಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹೆಬ್ರಿ ತಾಲ್ಲೂಕು ಘೋಷಿಸಲು ವೀರಪ್ಪ ಮೊಯಿಲಿಯವರ ದೊಡ್ಡ ಶ್ರಮವಿದೆ, ತಾಲ್ಲೂಕು ಹೋರಾಟಕ್ಕೆ 50 ವರ್ಷಗಳಿಂದ ಹೋರಾಡಿದ ಎಲ್ಲರಿಗೂ ಕಾಗೋಡು ತಿಮ್ಮಪ್ಪ ಕೃತಜ್ಞತೆ ಸಲ್ಲಿಸಿದರು.

ಜೀವನದಲ್ಲಿ ಮುಕ್ತಿ ಪಡೆಯಬೇಕಿದೆ : ಕಂದಾಯ ಇಲಾಖೆಯ ಜಮೀನಿನ ಸಮಸ್ಯೆಯನ್ನು ಶಾಶ್ವತವಾಗಿ ಇತ್ಯರ್ಥಪಡಿಸಿ ಜೀವನದಲ್ಲಿ ಮುಕ್ತಿ ಪಡೆಯಬೇಕು ಎಂದು ಬಯಸಿದ್ದೇನೆ, ಖಂಡಿತ ಆ ಕೆಲಸ ಮಾಡುತ್ತೇನೆ, ಡೀಮ್ಡ್ ಫಾರೆಸ್ಟ್ ಸಹಿತ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿ ಎಲ್ಲರಿಗೂ ಹಕ್ಕುಪತ್ರ ನೀಡುತ್ತೇನೆ, ನಮ್ಮ ಜನ ಕಾಡಿನ ಪಕ್ಕದಲ್ಲೇ ಹುಟ್ಟಿದವರು, ಅವರು ಅಲ್ಲೇ ಇರಬೇಕು, ಅವರ ಜಾಗಕ್ಕೆ ಹಕ್ಕು ಸಿಗಬೇಕು ಎಂಬುದೇ ನನ್ನ ಕನಸು ಎಂದ ಕಾಗೋಡು ತಿಮ್ಮಪ್ಪ ಎಲ್ಲರಿಗೂ ನ್ಯಾಯ ಒದಗಿಸಬೇಕು, ತಿಮ್ಮಪ್ಪ ಕಾಡು ಹಾಳು ಮಾಡುತ್ತಾನೆ ಎಂದು ಎಲ್ಲರೂ ಹೇಳುತ್ತಾರೆ, ಅದು ನಮಗೆ ಮುಖ್ಯ ಅಲ್ಲ, ನನಗೆ ಜನ ಬದುಕಬೇಕು ಎಂದರು. ಹೆಬ್ರಿ ಹೊಸ ತಾಲ್ಲೂಕಿನಿಂದ ಪಾರದರ್ಶಕ ಆಡಳಿತದ ಜೊತೆಗೆ ಜನತೆಗೆ ಖುಷಿಯಿಂದ ಕೆಲಸಗಳು ನಡೆಯಬೇಕು, ಕೂಡಲೇ ಖಾಯಂ ತಹಶೀಲ್ಧಾರ್ ನೇಮಕವನ್ನು ಕೂಡ ಮಾಡುವುದಾಗಿ ತಿಳಿಸಿದರು. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ಯೇಕ ಸಭೆ ನಡೆಸಿ ಜಮೀನು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.

ಅತ್ಯಂತ ಖುಷಿಯಾಗಿದೆ – ಮೊಯಿಲಿ
ಸಕಲ ಅರ್ಹತೆಯಿರುವ ಹೆಬ್ರಿ ತಾಲ್ಲೂಕು ಆಗಿರುವುದು ನನಗೆ ಅತ್ಯಂತ ಖುಷಿಯಾಗಿದೆ, ತಾಲ್ಲೂಕಿನ ಆಡಳಿತದಿಂದ ಅಭಿವೃದ್ಧಿಗೆ ವೇಗ ದೊರಕಿದೆ, ಮುಂದಿನ ದಿನಗಳಲ್ಲಿ ಹತ್ತಿರದ ಗ್ರಾಮಗಳನ್ನು ಸೇರಿಸಿ ಹೆಬ್ರಿ ತಾಲ್ಲೂಕು ವ್ಯಾಪ್ತಿಯನ್ನು ವಿಸ್ತರಿಸಿ ದೊಡ್ಡ ತಾಲ್ಲೂಕ್ಕಾಗಿ ಪರಿವರ್ತಿಸಲಾಗುವುದು ಎಂದರು. ಹೆಬ್ರಿ ಸಣ್ಣ ತಾಲ್ಲೂಕಿನಿಂದ ಹೆಚ್ಚು ಕೆಲಸಗಳು ಆಗಬೇಕಿದೆ, ಪ್ರಾಮಾಣಿಕ ಕ್ರೀಯಾಶೀಲಾ ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಂದ ತಾಯಿಯಂತಿರುವ ಕಂದಾಯ ಇಲಾಖೆಯಲ್ಲಿ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಮೂಲಕ ಆಡಳಿತ ಚುರುಕಾಗಿದೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಲೋಕಸಭಾ ಸದಸ್ಯ ಡಾ.ಎಂ.ವೀರಪ್ಪ ಮೊಯಿಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಬ್ರಿ ತಾಲ್ಲೂಕಿನ ನನ್ನ ಕನಸು ನನಸು ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ವೀರಪ್ಪ ಮೊಯಿಲಿ ಕೃತಜ್ಞತೆ ಸಲ್ಲಿಸಿದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲ್ಲೂಕು ಹೋರಾಟಕ್ಕೆ ಕೈಜೋಡಿಸಿ ಸಮಿತಿ, ಸಂಘಸಂಸ್ಥೆಗಳು, ಸರ್ಕಾರ ಮತ್ತು ವೀರಪ್ಪ ಮೊಯಿಲಿ,ಗೋಪಾಲ ಭಂಡಾರಿಗೆ ಕೃತಜ್ಞತೆ ಸಲ್ಲಿಸಿ ಪೂರ್ಣ ಆಡಳಿತ ಕೂಡಲೇ ಹೆಬ್ರಿ ತಾಲ್ಲೂಕಿಗೆ ದೊರೆಯಬೇಕು, ಅಭಿವೃದ್ದಿಗೆ ಅರಣ್ಯ ಇಲಾಖೆ ಅಡ್ಡಗಾಲು ಹಾಕುವುದನ್ನು ಸರ್ಕಾರ ನಿಲ್ಲಿಸಬೇಕು ಎಂದರು.
ಹೆಬ್ರಿ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷರಾದ ಎಚ್.ಭಾಸ್ಕರ ಜೋಯಿಸ್ ತಾಲ್ಲೂಕು ರಚನರಯಾಗಲು ವಿಶೇಷ ಮುತುವರ್ಜಿ ವಹಿಸಿದ ವೀರಪ್ಪ ಮೊಯಿಲಿ ಸಹಿತ ಸಹಕರಿಸಿದ ಎಲ್ಲರಿಗೂ ಕೃತಜ್ಷತೆ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಹೆಬ್ರಿ ಪಂಚಾಯಿತಿ ಅಧ್ಯಕ್ಷ ಎಚ್. ಸುಧಾಕರ ಹೆಗ್ಡೆ, ಕುಂದಾಪುರ ಸಹಾಯಕ ಆಯುಕ್ತ ಭೂಬಾಲನ್, ಹೆಬ್ರಿ ತಹಶೀಲ್ಧಾರ್ ಮಹಾದೇವಯ್ಯ, ಕಂದಾಯ ನಿರೀಕ್ಷಕ ಮಂಜುನಾಥ ನಾಯಕ್, ಗ್ರಾಮ ಲೆಕ್ಕಾಧಿಕಾರಿ ಗಣೇಶ್ ಕುಲಾಲ್, ಹೆಬ್ರಿ ತಾಲ್ಲೂಕು ವ್ಯಾಪ್ತಿಯ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು ಹಾಜರಿದ್ದರು.
ಸೀತಾನದಿ ವಿಠ್ಠಲ ಶೆಟ್ಟಿ ಮತ್ತು ಟಿ.ಜಿ.ಆಚಾರ್ಯ ಕಾರ್ಯಕ್ರಮ ನಿರೂಪಿಸಿ ಕಾರ್ಕಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೇಶವ ಶೆಟ್ಟಿಗಾರ್ ವಂದಿಸಿದರು. ಹಲವು ಮಂದಿಗೆ ಜಾಗದ ಹಕ್ಕುಪತ್ರವನ್ನು ಸಚಿವ ಕಾಗೋಡು ತಿಮ್ಮಪ್ಪ ವಿತರಿಸಿದರು.
ಮುಖ್ಯಾಂಶಗಳು..
ಭಂಡಾರಿ ಗೈರು ಬೇಸರವಾಗಿದೆ : ಮೊಯಿಲಿ
ಹೆಬ್ರಿ ತಾಲ್ಲೂಕು ರಚನೆಯ ಹಿಂದೆ ದೊಡ್ಡ ಕೆಲಸವನ್ನು ಮಾಜಿ ಶಾಸಕ ಹೆಬ್ರಿ ಗೋಪಾಲ ಭಂಡಾರಿ ಮಾಡಿದ್ದಾರೆ. ಸರ್ಕಾರದ ಕಾರ್ಯಕ್ರಮ ಸಂಹಿತೆಯ ತೊಡಕಿನಿಂದ ಕರೆಯಲಾಗಿಲ್ಲ, ಅವರ ಗೈರು ನನಗೆ ಅತ್ಯಂತ ಬೇಸರವಾಗಿದೆ. ಮುಂದೆ ಪ್ರೋಟೋಕಾಲ್ ಕ್ರಮ ಬದಲಿಸಬೇಕಿದೆ. ಕೆಲವೊಮ್ಮೆ ಮಾಜಿ ಶಾಸಕರು, ಮಾಜಿ ಸಂಸದರನ್ನೂ ಕರೆಯಬೇಕಿದೆ.
ಇಂತಹ ಮುಖ್ಯಮಂತ್ರಿಯನ್ನೇ ನೋಡಿಲ್ಲ…
ದಿನವೂ ಜನರ ಬಗ್ಗೆಯೇ ಚಿಂತಿಸಿ, ಗ್ರಾಮೀಣ ಜನತೆ, ಕೃಷಿಕರು, ಬಡಜನರ ಪರಿವಾಗಿ ಕೆಲಸ ಮಾಡುವ, ನಿರಂತರ ಜರಪರ ಯೋಜನೆಯನ್ನು ಜಾರಿಗೊಳಿಸುವ ಮುಖ್ಯಮಂತ್ರಿಯನ್ನು ದೇಶದಲ್ಲೇ ಕಂಡಿಲ್ಲ ಎಂದು ವೀರಪ್ಪ ಮೊಯಿಲಿ ಸಿದ್ಧರಾಮಯ್ಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕರ್ನಾಟಕದ ಪ್ರಣಾಳಿಕೆ ತಯಾರಿಯ ಜವಾಬ್ಧಾರಿಯನ್ನು ನನಗೆ ಕೊಟ್ಟಿದ್ದಾರೆ. ಶುದ್ಧ ಪಾರದರ್ಶಕ, ಚುರುಕಿನ ಜನಪರ ಸರ್ಕಾರವನ್ನು ಮತ್ತೋಮ್ಮೆ ನೀಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡುವುದಾಗಿ ಮೊಯಿಲಿ ಹೇಳಿದರು.
