ಮಂಗಳೂರು: ನಗರದ ಪ್ರಸಿದ್ಧ ಕ್ಷೇತ್ರದಲ್ಲೊಂದಾದ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ವಿಜ್ರಂಭಣೆಯಿಂದ ನಡೆಯುತ್ತಿದ್ದು, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯ ವತಿಯಿಂದ ನಾಗದೇವರಿಗೆ ಮಹಾನ್ 108 ಆಶ್ಲೇಷ ಬಲಿ ಪೂಜೆಯು ನಾಗದೇವರ ಪ್ರೀತ್ಯರ್ಥ ದೇವಳದ ಪ್ರಾಂಗಣದಲ್ಲಿ ಹಾಗೂ ನಾಗವನದಲ್ಲಿ ನಡೆಯಿತು.
ಏಕಕಾಲದಲ್ಲಿ 108 ಪ್ರತ್ಯೇಕ ಮಂಡಲ ಹಾಕಿ, 108 ಆಶ್ಲೇಷ ಬಲಿ ಪೂಜೆಯು 108 ವೈದಿಕರಿಂದ ಹಾಗೂ ತಂತ್ರಿಗಳಾದ ಕೆ. ನರಸಿಂಹ ತಂತ್ರಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಕೆ. ಕೃಷ್ಣರಾಜ ತಂತ್ರಿಯವರ ನೇತೃತ್ವದಲ್ಲಿ ಜರಗಿತು.
ಫೆ 20ರ ಬೆಳಗ್ಗೆ 5.00 ರಿಂದ ಪ್ರರಂಭವಾದ ಸಾಮಾನ್ಯ ಪ್ರಾಯಶ್ಚಿತ ಹೋಮಗಳು, ನಾಗವನದಲ್ಲಿ ನಾಗದೇವರಿಗೆ ಕಲಷಾಭಿಷೇಕ, ಪ್ರಸನ್ನ ಪೂಜೆ, ಸರ್ಪ ಸೂಕ್ತ ಹೋಮ, ಮೃತುಂಜಯ ಹೋಮ, ಬ್ರಹ್ಮಚಾರಿ ಮತ್ತಿತರ ಪೂಜಾ ಕೈಂಕರ್ಯಗಳು ನರೆವೇರಿತು.
ಪೂಜೆ ಮುಕ್ತಾಯಗೊಂಡ ನಂತರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಿಂದಿನ ಅರ್ಚಕರಾದ ಕೇಶವ ಜೋಗಿತ್ತಾಯ ಹಾಗೂ ಸಗ್ರಿ ವಾಸುಕೀ ನಾಗರಾಜ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾಗಪಾತ್ರಿ ಗೋಪಾಲಕೃಷ್ಣ ಸಾಮಗರ ಮುಂದಾಳತ್ವದಲ್ಲಿ ಎಲ್ಲಾ ಆಶ್ಲೇಷಾಬಲಿ ಮಂಡಲದಿಂದ ಪ್ರಸಾದ ತೆಗೆದು ಅನಂತ ಪದ್ಮನಾಭ ದೇವರ ಎದುರಿನಲ್ಲಿ ಪ್ರಾರ್ಥಿಸಿ ವಾದ್ಯ ಮೇಳದೊಂದಿಗೆ ನಾಗವನಕ್ಕೆ ತೆರಳಿ ಅಲ್ಲಿ ವಿಶೇಷ 108 ಮಹಾ ಆಶ್ಲೇಷಾ ಬಲಿ ಪೂಜೆಯ ಪ್ರಸಾದ ಹಾಕಿ ನಂತರ ಭಗವತ್ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ರಾತ್ರಿ ದೇವರ ಬಲಿ ಉತ್ಸವ ನಡೆದ ಬಳಿಕ ಮಹಾ ಅನ್ನ ಸಂತರ್ಪಣೆ ಯೋಜಿಸಲಾಗಿತ್ತು.
https://youtu.be/zcoOzMWm7P0

