ಮಂಗಳೂರು: ಇಲ್ಲಿನ ಕುಡುಪು ಕ್ಷೇತ್ರದ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಹೊರಕಾಣಿಕೆ ಸಮರ್ಪಣೆ ಕಾರ್ಯಕ್ರಮಕ ಅದ್ದೂರಿಯಾಗಿ ಮೆರವಣಿಗೆ ಮೂಲಕ ರವಿವಾರ ನಡೆಯಿತು.
ನಗರದ ನೆಹರೂ ಮೈದಾನದಲ್ಲಿ ಆರಂಭಗೊಂಡ ಹೊರಕಾಣಿಕೆ ಸಮರ್ಪಣೆ ಮೆರವಣಿಗೆಗೆ ಶರವು ದೇವಸ್ಥಾನದ ರಾಘವೇಂದ್ರ ಶಾಸ್ತ್ರಿ ಪೂಜಾ ಕೈಂಕರ್ಯ ನಡೆಸಿದ ಬಳಿಕ ಮಂಗಳೂರು ಮೇಯರ್ ಕವಿತಾ ಸನಿಲ್, ಶಾರದಾ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ .ಬಿ.ಪುರಾಣಿಕ್, ಹಸಿರು ನಿಶಾನೆ ತೋರಿಸುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ನೆಹರು ಮೈದಾನದಿಂದ ಹೊರಟ ಈ ಮೆರವಣಿಗೆ ಜ್ಯೋತಿ, ಬಂಟ್ಸ್ ಹಾಸ್ಟೆಲ್, ಕದ್ರಿ, ನಂತೂರು, ಬಿಕರ್ನಕಟ್ಟೆ ಹಾಗೂ ಕುಲಶೇಕರ ಮೂಲಕ ಕುಡುಪು ಕ್ಷೇತ್ರಕ್ಕೆ ತಲುಪಿತು. ಈ ವೇಳೆ ಸಾವಿರಾರು ಭಕ್ತರು ಭಾಗವಹಿಸಿ ತಾಮ್ರ, ಹಿತ್ತಾಳೆ ಪಾತ್ರೆ ಸೇರಿದಂತೆ ಪೂಜಾ ಪರಿಕರ ಹಾಗೂ ಇನ್ನಿತರ ಹರಕೆ ಸೇವೆಗಳನ್ನು ಹೊರಕಾಣಿಕೆಗೆ ಸಲ್ಲಿಸುವ ಮೂಲಕ ದೇವರಿಗೆ ಭಕ್ತಿಯಿಂದ ಸಮರ್ಪಿಸಿದರು.
ಮೆರವಣಿಗೆಯಲ್ಲಿ ಸಮಿತಿ ಸಂಚಾಲಕ ಮಹಾಬಲ ಪೂಜಾರಿ, ಅಚ್ಯುತ್ ಭಟ್, ಹೊರಕಾಣಿಕೆ ಸಮಿತಿ ಸಂಚಾಲಕರಾದ ಗಣೇಶ್ ಭಟ್ ಶರವು, ಸದಾನಂದ ಪೂಜಾರಿ, ಮಟ್ಟಿ ಲಕ್ಷ್ಮೀ ನಾರಾಯಣ ರಾವ್, ಬ್ರಹ್ಮಕಲಶೋತ್ಸವ ಗೌರವಾಧ್ಯಕ್ಷ ಚಂದ್ರಹಾಸ ರೈ, ಹೊರಕಾಣಿಕೆ ಸಮಿತಿ ಸಂಯೋಜಕರಾದ ದಯ್ ಕುಮಾರ್ ಕುಡುಪು, ಪುಷ್ಪರಾಜ್ ಪೂಜಾರಿ, ಶರಣ್ ಪಂಪ್ ವೆಲ್, ಸುದರ್ಶನ್. ಕೆ., ವಾಸುದೇವ್ ರಾವ್, ಮಹೇಶ್ ಮೂರ್ತಿ, ಪ್ರಭಾಕರ ಭಟ್ ಮತ್ತಿತರರು ಭಾಗವಹಿಸಿದ್ದರು.



