ಮಂಗಳೂರು: ಮೊಬೈಲ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಕುದುರೆಮುಖ ಬಸ್ಸ್ ನಿಲ್ದಾಣದ ಬಳಿ ಪಣಂಬೂರು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಬಂದರಿನ ನಿವಾಸಿ ಮೊಹಮ್ಮದ್ ಫಹಾದ್ ಹಾಗೂ ಕಂಕನಾಡಿಯ ಮೊಹಮ್ಮದ್ ಆಫ್ರೀದ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ: ಪಶ್ಚಿಮಬಂಗಾಳ ಮೂಲದ ರಾಜು ಅವರು ಫೆ.11 ರಂದು ಇಲ್ಲಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಸ್ಕೂಟರ್ನಲ್ಲಿ ಬಂದ ಬಂಧಿತ ಆರೋಪಿಗಳು ರಾಜು ಸರ್ಕಾರ್ ಬಳಿ ಇದ್ದ ಮೊಬೈಲ್ ಹಾಗೂ ಹಣ ಎಗರಿಸಿಕೊಂಡು ಪರಾರಿಯಾಗಿದ್ದರು. ಬಳಿಕ ರಾಜು ಅವರು ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಗಳ ಪತ್ತೆಗೆ ಪಣಂಬೂರು ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ಆರೋಪಿಗಳನ್ನು ಕುದುರೆಮುಖ ಬಸ್ಸ್ ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಂಡಿದ್ದು, ಕೃತ್ಯಕ್ಕೆ ಬಳಸಿದ್ದ ಒಂದು ಹೊಂಡಾ ಆಕ್ಟೀವಾ ಸ್ಕೂಟರ್ ಹಾಗೂ ಎರಡು ಮೊಬೈಲ್ಫೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

