ಕಲಬುರಗಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಕಾರ್ಖಾನೆ ಪ್ರಾರಂಭಿಸದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ನಾಲಾಯಕ್ ರಾಜಕಾರಣಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಕ್ಷೇತ್ರಕ್ಕೆ ನಿವೇನು ಮಾಡಿದ್ದೀರಿ? ಎಂಬುದರ ಬಗ್ಗೆ ಮೊದಲು ಬಹಿರಂಗ ಪಡಿಸಲಿ ಎಂದು ಹೆಗಡೆಗೆ ಸವಾಲು ಹಾಕಿದ ಅವರು, ಅನಂತಕುಮಾರ ಹೆಗಡೆ ಅವರು ತಮ್ಮ ಕ್ಷೇತ್ರದಿಂದ ಅನೇಕ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಒಂದೇ ಒಂದು ಕಾರ್ಖಾನೆ ಪ್ರಾರಂಭಿಸಲು ಸಾಧ್ಯವಾಗಿಲ್ಲ ಎಂದರೆ ಅವರೇ ನಾಲಾಯಕ್ ಅಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾವು 120 ಸ್ಥಾನ ಗೆದ್ದೆ ಬಿಟ್ಟಿದ್ದೇವೆ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸ್ವಂತ ಬಲದಲ್ಲಿ ಗೆಲುವು ಸಾಧ್ಯವಾಗದೆ ಬೇರೆ ಪಕ್ಷಗಳ ನಾಯಕರಿಗಾಗಿ ಕಾಯುತ್ತಿದ್ದಾರೆ ಎಂದು ಟೀಕಿಸಿದರು.

