ಬೆಳಗಾವಿ: ಇತ್ತೀಚಿಗೆ ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಆದರೆ ಇಲ್ಲಿನ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದಲಿತರಿಗೆ ಸೂಕ್ತ ರಕ್ಷಣೆ ನೀಡವಲ್ಲಿ ವಿಫಲವಾಗಿವೆ ಎಂದು ದಲಿತ ಸಂಘಟನೆ ಮುಖಂಡ ಮಲ್ಲೇಶ ಚೌಗಲೆ ಕಿಡಿಕಾರಿದ್ದಾರೆ.
ಕೋರೆಗಾಂವ್ ಹಿಂಸಾಚಾರ ಹಾಗೂ ವಿಜಯಪುರ ದಲಿತ ಬಾಲಕಿ ಮೇಲೆ ಅತ್ಯಾಚಾರ ಕೊಲೆ ಖಂಡಿಸಿ ನಗರದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ದಿನನಿತ್ಯ ಸುಮಾರು 300ಕ್ಕೂ ಹೆಚ್ಚು ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರು ಈ ಬಗ್ಗೆ ಸರ್ಕಾರಗಳು ಕಂಡು ಕಾಣದಂತೆ ಕುರುಡರಂತೆ ವರ್ತಿಸುತ್ತಿವೆ. ಇತ್ತೀಚೆಗೆ ಭೀಮಾ ಕೋರೆಗಾಂವ್ ನಲ್ಲಿ ವಿಜಯೋತ್ಸವ ಆಚರಿಸುತ್ತಿದ್ದ ದಲಿತರ ಮೇಲೆ ಮನುವಾದಿಗಳು ಹಿಂಸಾಚಾರ ನಡೆಸಿದ್ದು, ಆರೋಪಿಗಳನ್ನು ಕೂಡಲೇ ಮಹಾರಾಷ್ಟ್ರ ಸರ್ಕಾರ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂವಿಧಾನ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ಸಚಿವ ಸಂಪುಟ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ವಿಜಯಪುರ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಸವರ್ಣಿಯರನ್ನು ಗಲ್ಲು ಶಿಕ್ಷೆಗೆ ಗುರುಪಡಿಸಬೇಕು ಎಂದು ಒತ್ತಾಯಸಿದರು.
ಬಳಿಕ ಪ್ರತಿಭಟನಾಕಾರರು ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಪೊಲೀಸರ ಸರ್ಪಗಾವಲಿನಲ್ಲಿ ಪ್ರತಿಭಟನೆ: ಪ್ರತಿಭಟನೆಗೂ ಮುನ್ನ ಅಂಗಡಿಗಳಿಗೆ ಕಲ್ಲು ತೂರಾಟ ನಡೆಸಿದ್ದ ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಎಚ್ಚೆತ್ತುಕೊಂಡು ಪೊಲೀಸರು ಬಂದೋಬಸ್ತ್ ಕೈಗೊಂಡು ಪೊಲೀಸ ಸರ್ಪಗಾವಲಿನಲ್ಲಿ ದಲಿತ ಪರ ಸಂಘಟನೆಗಳಿಗೆ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಟ್ಟರು.

