ಬೆಂಗಳೂರು: ಧನ್ಯಶ್ರೀ ಆತ್ಮಹತ್ಯೆ ಬಗ್ಗೆ ಬಿಜೆಪಿಗರು ಮಾತನಾಡುತ್ತಿಲ್ಲ. ದೀಪಕ್ ರಾವ್ ಹಾಗೂ ಧನ್ಯಶ್ರೀ ಸಾವಿನ ಬಗ್ಗೆ ದ್ವೀಮುಖ ಸಿದ್ಧಾಂತ ತಾಲುವ ಬಿಜೆಪಿ ಹಾಗೂ ಆರೆಸ್ಸೆಸ್ ನವರು ಜಿಹಾದಿಗಳು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಬುಧವಾರ ನಗರದ ಮೌರ್ಯ ವೃತ್ತದಲ್ಲಿ ಮೂಡಿಗೆರೆ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಗರು ಪಾಲುದಾರರು ಎಂದು ಆರೋಪಿಸಿ ಎನ್‍ಎಸ್‍ಯುಐ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೀಪಕ್ ರಾವ್ ಹತ್ಯೆಯಲ್ಲಿ ರಾಜಕೀಯ ಮಾಡುವ ಬಿಜೆಪಿ ಹಾಗೂ ಆರೆಸ್ಸೆಸಿಗರು ಧನ್ಯಶ್ರೀ ಆತ್ಮಹತ್ಯೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಆಕೆ ಹಿಂದೂ ಅಲ್ಲವೇ ಎಂದು ಪ್ರಶ್ನಿಸಿದ ಅವರು, ಧನ್ಯಶ್ರೀ ಆತ್ಮಹತ್ಯೆಯಲ್ಲಿ ನೇರವಾಗಿ ಬಜರಂಗದಳದ ಮುಖಂಡರು ಭಾಗಿಯಾಗಿರುವುದರಿಂದ ಬಿಜೆಪಿಗರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಮಂಜುನಾಥ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.


