ಬಂಟ್ವಾಳ:ಸಮಾಜದಲ್ಲಿ ನಾವೆಲ್ಲರೂ ಶಾಂತಿ ಮತ್ತು ನೆಮ್ಮದಿ ಜೊತೆಗೆ ಆರೋಗ್ಯವಂತರಾಗಿ ಜೀವಿಸಲು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಶತಾಯುಷಿ ಡಾ. ಸಾಲುಮರ ತಿಮ್ಮಕ್ಕ ಹೇಳಿದ್ದಾರೆ.
ತಾಲ್ಲೂಕಿನ ಪಾಣೆಮಂಗಳೂರು ಎಸ್‍ವಿಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರು ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ವತಿಯಿಂದ ಭಾನುವಾರ ಸಂಜೆ ನಡೆದ ‘ನೃತ್ಯ ಸಂಧ್ಯಾ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ತಾಲ್ಲೂಕಿಗೆ ಪ್ರಥಮ ಬಾರಿಗೆ ಆಗಮಿಸಿದ ಇವರು ‘ವೃಕ್ಷ ಅಭಿಯಾನ’ ಕಾರ್ಯಕ್ರಮಕ್ಕೆ ಇದೇ ವೇಳೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು.ಸಾಕುಪುತ್ರ ಉಮೇಶ್ ಜೊತೆ ಆಗಮಿಸಿದ ಅವರು ಮಕ್ಕಳಿಗೆ ವೃಕ್ಷ ಅಭಿಯಾನ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಸುಮಾರು 150 ಮಂದಿ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿದ ಅವರು, ಗಿಡ ಸಾಕಿ ಸಲಹುವ ಬಗ್ಗೆ ಕಿವಿಮಾತು ಹೇಳಿದರು. ನೃತ್ಯ ಕಲಾಕೇಂದ್ರ ಸಂಚಾಲಕ ಉದಯ್ ವೆಂಕಟೇಶ್, ನೃತ್ಯ ನಿರ್ದೇಶಕಿ ರೋಹಿಣಿ ಉದಯ್, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಜಯಲಕ್ಷ್ಮಿ ಪ್ರಭು, ಶಾಲಾ ಸಂಚಾಲಕ ವೆಂಕಟ್ರಾಯ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

