ವಾಮಂಜೂರು: ಅಂಗವಿಕಲರ ಕಲ್ಯಾಣ ಸಂಸ್ಥೆ- ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ, ವಾಮಂಜೂರು , ಮಂಗಳೂರು ಸಂಸ್ಥೆಗೆ ಸಮನ್ವಯ ಶಿಕ್ಷಣದ ಮೂಲಕ ವಿಕಲಚೇತನರ ಸಬಲೀಕರಣ ಮಾಡಿದುದಕ್ಕಾಗಿ ರಾಷ್ಟ್ರಪ್ರಶಸ್ತಿ ದೊರತ ಸಂದರ್ಭದಲ್ಲಿ ಸಂಸ್ಥೆಗೆ ಭೇಟಿ ನೀಡಿ ಅಭಿನಂದಿಸಿದ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡುತ್ತಾ ವಿಕಲಾಂಗ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ಜೀವನ ಕೌಶಲ್ಯ ತರಬೇತಿ ಕೊಟ್ಟು ಸಮಾಜದ ಮುಖ್ಯ ವಾಹಿನಿಗೆ ತರುವುದು ಹಾಗೂ ಅವರಿಗೆ ಸಮಾಜ ನೀಡುವ ಮನ್ನಣೆ ನೀಡುವಂತಾಗುವುದು ದೊಡ್ಡ ಪ್ರಶಸ್ತಿ, ಎಂದು ನುಡಿದರು.
ವಿಕಲ ಚೇತನರೆಂದು ಮೂಲೆಗುಂಪು ಮಾಡದೆ ಅವರಿಗೂ ಈ ಸಮಾಜದಲ್ಲಿ ಬದುಕುವ ಅವಕಾಶಗಳನ್ನು ಕಲ್ಪಿಸಿದಾಗ ಅವರೂ ಬೆಳಕನ್ನು ಕಾಣುವಂತಾಗುತ್ತದೆ ಎಂದು ಹೇಳಿದರು. ಸಂಸ್ಥೆಯು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣೀ ಕರ್ತರಾದ ಸಂಸ್ಥೆಯ ಅಧ್ಯಾಪಕರನ್ನು ಮತ್ತು ಸಿಬ್ಬಂದಿ ವರ್ಗದ ಸೇವೆಯನ್ನು ಶ್ಲಾಘಿಸಿದರು. ಪ್ರಶಸ್ತಿಯು ಸಂಸ್ಥೆಯ ಸೇವಾ ಮನೋಭಾವವನ್ನು ಹೆಚ್ಚಿಸಲಿ ಎಂದು ನುಡಿದು 36 ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಸ್ಥಾಪಿಸಿದ್ದ ದಿ ಮೋಹಿನೀ ಅಪ್ಪಾಜೀ ನಾೈಯ್ಕ್ ಅವರ ಸೇವೆಯನ್ನು ಸ್ಮರಿಸಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಪೆÇ್ರ ಎ ರಾಜೇಂದ್ರ ಶೆಟ್ಟಿಯವರು ದೆಹಲಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದ ಅನುಭವಗಳನ್ನು ವಿವರಿಸಿದರು ಮತ್ತು ಸಂಸ್ಥೆಯು ಈ ಮಟ್ಟಕ್ಕೆ ಬೆಳೆಯಲು ಕಾರಣೀಕರ್ತರಾದ ಅಧ್ಯಕ್ಷರಾದ ಡಾ ಡಿ ವಿರೇಂದ್ರ ಹೆಗ್ಗಡೆಯವರ ಕೊಡುಗೆಗಳನ್ನು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವತಿಯಿಂದ ಸಂಸ್ಥೆಯ ಎಲ್ಲಾ ಸಿಬ್ಬಂಡಿಗಳನ್ನು ಹಾಗೂ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಮಾರಿಯಟ್ ಮಸ್ಕರೇನಸ್, ಐ ಟಿ ಐ ಪ್ರಾಶುಪಾಲರಾದ ನರೇಂದ್ರ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರೆ, ಹೈಸ್ಕೂಲ್ ವಿಭಾಗದ ಮುಖ್ಯಸ್ಥರಾದ ಅಶೋಕ್ ಕುಮಾರ್ ವಂದಿಸಿದರು. ರಮೇಶ್ ಆಚಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
