ಮಂಗಳೂರು: ಕೊಡಗು ಪರಂಪರಾಗತವಾಗಿ ವೀರ ಯೋಧರ ನೆಲೆವೀಡು. ಈ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕು, ಕುಶಾಲನಗರ ಹೋಬಳಿ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಸಿರುಗುಪ್ಪೆಯ ಕಾಫಿ ತೋಟವೊಂದರಲ್ಲಿ ಆತ್ಮಬಲಿ ಪ್ರಕಾರದ ವೀರಗಲ್ಲು ಶಾಸನವೊಂದು ಪುರಾತತ್ವ ಅನ್ವೇಷಣೆಯ ಸಂದರ್ಭದಲ್ಲಿ ಕಂಡು ಬಂದಿದೆ.
ಭಾರತದಲ್ಲಿ ಹೇರಳವಾದ ವೀರಗಲ್ಲುಗಳು ದೊರೆಯುತ್ತವೆ. ಆದರೆ, ಶಾಸನೋಕ್ತ ವೀರಗಲ್ಲುಗಳ ಸಂಖ್ಯೆ ಬೆರಳೆಣಿಕೆಯಷ್ಟಿವೆ. ಭಾರತೀಯ ಚರಿತ್ರೆಯಲ್ಲಿ ಅತ್ಯಂತ ಪ್ರಾಚೀನ ಕಾಲದಿಂದಲೂ ವಿವಿಧ ರೀತಿಯ ಆತ್ಮಬಲಿ ಅಥವಾ ದೇಹ ತ್ಯಾಗದ ಪದ್ಧತಿಗಳು ಅಸ್ತಿತ್ವದಲ್ಲಿದ್ದಂತೆ ತಿಳಿದು ಬರುತ್ತದೆ. ವೇಳೆವ್ಯಾಳಿ, ಲೆಂಕ, ಗರುಡ, ಸಿಡಿತಲೆ, ಸತಿ, ಶೂಲಬ್ರಹ್ಮ ಪದ್ಧತಿಗಳು ಶಾಸನಗಳಲ್ಲಿ ಕಂಡು ಬರುತ್ತವೆ.
ಸಿರುಗುಪ್ಪೆ ಶಾಸನ ಸುಮಾರು 4 ಅಡಿ ಎತ್ತರವಾದ ಒಂದು ಆಯತಾಕಾರದ ಕಲ್ಲು. ಇದನ್ನು ನಾಲ್ಕು ಪಟ್ಟಿಕೆಗಳಾಗಿ ವಿಂಗಡಿಸಿಕೊಳ್ಳಲಾಗಿದೆ. ಮೇಲಿನ ಪಟ್ಟಿಕೆಯಲ್ಲಿ 3 ಸಾಲಿನ ಬರಹವಿದೆ. ನಾಲ್ಕನೇ ಸಾಲನ್ನು ಶಾಸನದ ಎಡಭಾಗದ ಪಟ್ಟಿಯ ಮೇಲೆ ಬರೆಯಲಾಗಿದೆ. ಪೂರ್ವದ ಹಳಗನ್ನಡ ಲಿಪಿ ಮತ್ತು ಕನ್ನಡ ಭಾಷೆಯಲ್ಲಿ ಶಾಸನವನ್ನು ರಚಿಸಲಾಗಿದೆ.

ಶಾಸನದಲ್ಲಿರುವ ವಿಚಾರಗಳು;
ಶಾಸನೋಕ್ತ ವಿವರಣೆಯಿಂದ, ಆನೆಗಳ ಮುಖ್ಯಸ್ಥನಾಗಿದ್ದ ನಾಕ ಶೆಟ್ಟಿಯ ಮಗ ಭಾವ ಗಾವುಂಡ ಎಂಬುವನು ಸತ್ತ. ಮರಣ ಹೊಂದಿದ ಈ ವ್ಯಕ್ತಿಗೆ ಭೂಮಿಯನ್ನು ದಾನವಾಗಿ ನೀಡಲಾಗಿದೆ. ಅಣ್ಣಿಗ ಎಂಬ ವ್ಯಕ್ತಿ ಈ ಸ್ಮಾರಕಶಿಲೆಯನ್ನು ನಿಲ್ಲಿಸಿದನೆಂದು ತಿಳಿದು ಬರುತ್ತದೆ.
ಶಾಸನದ ಚಿತ್ರಪಟ್ಟಿಕೆಗಳು:
ವೀರಗಲ್ಲು ಶಾಸನದ ಚಿತ್ರಪಟ್ಟಿಕೆಗಳು, ಚಾರಿತ್ರಿಕ ಘಟನೆಯೊಂದರ ನಿರೂಪಣಾತ್ಮಕ ಶಿಲ್ಪಗಳನ್ನು ಒಳಗೊಂಡಿರುತ್ತವೆ. ಪ್ರಸ್ತುತ ಶಾಸನದ ಕೆಳಗಿನ ಚಿತ್ರಪಟ್ಟಿಕೆಯಲ್ಲಿ ವ್ಯಕ್ತಿಯೊಬ್ಬ ಎತ್ತರವಾದ ಮಂಚವೊಂದರ ಮೇಲೆ ಎರಡೂ ಕಾಲುಗಳನ್ನು ಮಡಚಿ ಕುಳಿತಿದ್ದಾನೆ. ತನ್ನ ಎರಡೂ ಹಸ್ತಗಳನ್ನು ಎದೆಗೆ ತಾಗಿಸಿ ನಮಸ್ಕಾರ ಮುದ್ರೆಯಲ್ಲಿ ಇರಿಸಿಕೊಂಡಿದ್ದಾನೆ. ಶಾಂತವಾದ ನಿರ್ಲಿಪ್ತ ಮುಖಭಾವದೊಂದಿಗೆ ತನ್ನ ಎರಡೂ ಕಣ್ಣುಗಳನ್ನು ಮುಚ್ಚಿ ಧ್ಯಾನಸ್ಥಿತಿಯಲ್ಲಿ ನಾನು ಸಿದ್ಧ ಎಂಬ ಭಂಗಿಯಲ್ಲಿ ಕುಳಿತಿದ್ದಾನೆ. ಅವನ ಬಲ ಪಕ್ಕದಲ್ಲಿ ಖಡ್ಗವನ್ನು ಎತ್ತಿ ಹಿಡಿದು ನಿಂತಿರುವ ಕಟುಕನ ಶಿಲ್ಪವಿದೆ.
ಎರಡನೇ ಪಟ್ಟಿಯಲ್ಲಿ ದೇವಕನ್ಯೆಯರು ಆತ್ಮಬಲಿಗೈದ ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿದ್ದಾರೆ. ಮೂರನೇ ಪಟ್ಟಿಯಲ್ಲಿ ವೀರಭಂಗಿಯಲ್ಲಿ ಕುಳಿತ ವೀರನನ್ನು ಚಾಮರಧಾರಿಣಿಯರು ಸೇವಿಸುತ್ತಿದ್ದಾರೆ.
ಶಾಸನದ ಕಾಲ ಮತ್ತು ಮಹತ್ವ:
ಶಾಸನವನ್ನು ಪೂರ್ವದ ಹಳೆಗನ್ನಡ ಲಿಪಿಯಲ್ಲಿ ರಚಿಸಲಾಗಿದೆ. ಶಾಸನದ ಕೆಲವು ಅಕ್ಷರಗಳು ರಾಷ್ಟ್ರಕೂಟ 3 ನೇ ಗೋವಿಂದ ಮತ್ತು ಗಂಗರ ಲಿಪಿ ಲಕ್ಷಣಗಳನ್ನು ಒಳಗೊಂಡಿವೆ. ಶಾಸನದಲ್ಲಿ ಅಣ್ಣಿಗ ಎಂಬ ವ್ಯಕ್ತಿಯ ಪ್ರಸ್ತಾಪವಿದೆ. ಈ ಹೆಸರು ಗಂಗರ ಕಾಲದಲ್ಲಿ ಪ್ರಚಲಿತದಲ್ಲಿದ್ದ ಹೆಸರುಗಳಲ್ಲಿ ಒಂದು ಆದ್ದರಿಂದ ಈ ವೀರಗಲ್ಲು ಶಾಸನದ ಕಾಲವನ್ನು 9ನೇ ಶತಮಾನದ ಪೂರ್ವಾರ್ಧದ ಶಾಸನವೆಂದು ಪರಿಗಣಿಸಬಹುದಾಗಿದೆ. ಈ ಶಾಸನದ ಶಿಲ್ಪ ವಿವರಗಳ ಆಧಾರದ ಮೇಲೆ ಇದನ್ನು ಗಂಗರ ಕಾಲದ ವೇಳೆವ್ಯಾಳಿ ಪ್ರಕಾರದ ಆತ್ಮಬಲಿ ಶಾಸನವೆಂದು ಪರಿಗಣಿಸಬಹುದು. ಈ ಶಾಸನ ಬಸಿರುಗುಪ್ಪೆಯ ದೇವಿ ದೇವಾಲಯದ ಎದುರಿನಲ್ಲಿ ಕಂಡು ಬರುವುದರಿಂದ ಧಾರ್ಮಿಕ ಆತ್ಮಬಲಿ ಶಾಸನವೆಂದು ಸಹ ತಿಳಿಯಲು ಸಾಧ್ಯವಿದೆ.
ಕೊಡಗಿನ ಗಾವುಂಡ ಅಥವಾ ಗೌಡ ಜನಾಂಗದ ಸಾಮಾಜಿಕ ಅಧ್ಯಯನ ದೃಷ್ಠಿಯಿಂದ ಈ ಶಾಸನ ಬಹಳ ಮಹತ್ವದ್ದಾಗಿದೆ. ಕೊಡಗಿನ ಗೌಡ ಜನಾಂಗದವರು ಗಂಗರ ಕಾಲದಲ್ಲಿಯೇ ಆನೆಪಡೆಯ ನಾಯಕರಾಗಿ ತಮ್ಮ ವೀರತ್ವವನ್ನು ಮೆರೆದ ಉದಾತ್ತ ಉದಾಹರಣೆ ಈ ಶಾಸನ.
