ಪೊಳಲಿ : ಪ್ರಸಕ್ತ ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಿಲ್ಲವ ಸಮಾಜ ಅರ್ಪಿಸಲಿರುವ ಧ್ವಜಸ್ತಂಭದ ಮರವನ್ನು ಪೊಳಲಿ ಕ್ಷೇತ್ರಕ್ಕೆ ನ. 19ರಂದು ಅದ್ದೂರಿ ಮೆರವಣಿಗೆಯಲ್ಲಿ ತರಲಾಗುವುದು ಎಂದು ಧ್ವಜಸ್ತಂಭ ನಿರ್ಮಾಣ ಬಿಲ್ಲವ ಸಮಿತಿ ತಿಳಿಸಿದೆ.
ಬಿ ಸಿ ರೋಡು ನಾರಾಯಣಗುರುವೃತ್ತದಿಂದ ಪೊಳಲಿ ದೇವಳವರೆಗೆ ಅದ್ದೂರಿ ಮೆರವಣಿಗೆಯಲ್ಲಿ ಸ್ವಾಮಿಜಿಗಳು ವಿವಿಧ ಧಾರ್ಮಿಕ ಮಖಂಡರುಗಳು ಭಾಗವಹಿಸಲಿದ್ದಾರೆ. ಮೆರವಣಿಗೆಯಲ್ಲಿ, ಗೊಂಬೆಬಳಗ , ಭಜನೆ, ಕೊಂಬು, ಬ್ಯಾಂಡ್, ನಾಶಿಕ್ ಬ್ಯಾಂಡ್ ವಿವಿಧ ವಾಧ್ಯ ಘೋಷಗಳೊಂದಿಗೆ ಧ್ವಜಸ್ತಂಭವನ್ನು ತರಲಾಗುವುದು.
ಸುಳ್ಯ ತಾಲೂಕಿನ ಸಂಪಾಜೆ ಮಡಿಕೇರಿ ಜಿಲ್ಲಾ ಸಂಸ್ಕರಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗುರುತಿಸಲಾಗಿರುವ ಮರವನ್ನು ನ. 15ರಂದು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ ಬಳಿಕ ಮರವನ್ನು ಕಡಿಯಲಾಗುತ್ತದೆ. ನ. 19ರಂದು ಬೆಳಿಗ್ಗೆ 9 ಗಂಟೆಗೆ ಮರಕ್ಕೆ ಮತ್ತೊಂದು ಸುತ್ತಿನ ವಿಶೇಷ ಪೂಜೆ ನಡೆದ ಬಳಿಕ ಬಿ ಸಿ ರೋಡು ಶ್ರೀ ನಾರಾಯಣ ಗುರು ವೃತ್ತದಿಂದ ಭವ್ಯ ಮೆರವಣಿಗೆಯಲ್ಲಿ ಪೊಳಲಿ ಶ್ರೀಕ್ಷೇತ್ರಕ್ಕೆ ವಾಹನದಲ್ಲಿ ಧ್ವಜಸ್ತಂಭದ ಮರ ತರಲಾಗುವುದು. ಅಂದು ಶಿಸ್ತುಬದ್ಧ ಮೆರವಣಿಗೆ ಕೊಂಡೊಯ್ಯುವ ಸಲುವಾಗಿ ಬಿಲ್ಲವ ಸಮಾಜದ 250 ಮಂದಿ ಸ್ವಯಂ-ಸೇವಕರು ಕಾರ್ಯ ನಿರ್ವಹಿಸಲಿದ್ದಾರೆ. ಎಂದು ಬಿಲ್ಲವರ ನಿರ್ಮಾಣ ಸಮಿತಿ ತಿಳಿಸಿದೆ. ಮೆರವಣಿಗೆಯಲ್ಲಿ ಊರ-ಪರವೂರ ಭಕ್ತಜನರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪೊಳಲಿ ಧ್ವಜಸ್ತಂಭ ನಿರ್ಮಾಣ ಬಿಲ್ಲವ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ವಿನಂತಿಸಿಕೊಂಡಿದ್ದಾರೆ.
ಶ್ರೀ ಕ್ಷೇತ್ರ ಪೊಳಲಿಯ ಜೀರ್ಣೋದ್ಧಾರ ಸಂದರ್ಭದಲ್ಲಿ ಶಿಥಿಲಗೊಂಡಿದ್ದ ಧ್ವಜಸ್ತಂಭ ಹಿಂದೆ ಬಿಲ್ಲವ ಸಮಾಜವೇ ಪೊಳಲಿ ಅಮ್ಮನವರಿಗೆ ಕಾಣಿಕೆ ರೂಪದಲ್ಲಿ ಧ್ವಜಸ್ತಂಭ ಸಮರ್ಪಿಸಿತ್ತು. ಈ ಬಾರಿಯೂ ಬಿಲ್ಲವ ಸಮಾಜವೇ ಹೊಸ ಧ್ವಜಸ್ತಂಜ ಸೇವಾರೂಪದಲ್ಲಿ ನೀಡುತ್ತಿದ್ದು, ಇದಕ್ಕೆ ಅಂದಾಜು ವೆಚ್ಚ 50 ಲಕ್ಷದಿಂದ 75 ಲಕ್ಷದವರೆಗೆ ರೂ ಖರ್ಚಾಗಲಿದೆ ಎನ್ನಲಾಗಿದೆ.
