ಯಕ್ಷಗಾನ ಕಲಾವಿದ ಶಿವರಾಮ ಜೋಗಿ ರಾಜ್ಯೋತ್ಸವ ಪ್ರಶಸ್ತಿ
ತೆಂಕುತಿಟ್ಟು ಯಕ್ಷಗಾನ ಲೋಕದ ಮೇರು ಕಲಾವಿದ ಶಿವರಾಮ ಜೋಗಿ ಅವರಿಗೆ ಈ ಬಾರಿಯ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ತನ್ನ ವೃತ್ತಿ ಬದುಕಿನ 63 ಸಂವತ್ಸರಗಳನ್ನೂ ಸಹ ಯಕ್ಷಗಾನ ಕಲೆಯಲ್ಲಿಯೇ ಕಳೆದ 76 ಹರೆಯದ ಶಿವರಾಮ ಜೋಗಿ ಬಂಟ್ವಾಳದ ಬೈಪಾಸ್ ಪೂಂಜರಕೋಡಿಯವರು.ಮೂಲತಃ ಕಾಂಚನದವರು. ತನ್ನ 15 ನೇ ಎಳೆಯ ವಯಸ್ಸಿನಲ್ಲಿಯೇ ಯಕ್ಷಗಾನ ಕಲಾ ಲೋಕಕ್ಕೆ ಪ್ರವೇಶಿಸಿದ ಅಭಿಜಾತ ಕಲಾವಿದ. ಕುಡಾಣ ಗೋಪಾಲ ಕೃಷ್ಣ ಭಟ್ ಅವರಿಂದ ನಾಟ್ಯವನ್ನು ಕಲಿತ ಜೋಗಿಯವರಿಗೆ ವಿಟ್ಲ ಗೋಪಾಲಕೃಷ್ಣ ಜೋಷಿ ನಾಟ್ಯದ ನಾನಾ ಹೆಜ್ಜೆಗಳನ್ನು ಕಲಿಸಿದರೆ, ಯಕ್ಷಲೋಕದ ದಿಗ್ಗಜ, ವಾಗ್ಭೀಷ್ಮ ಶೇಣಿ ಗೋಪಾಲಕೃಷ್ಣ ಭಟ್ ಅರ್ಥಪೂರ್ಣ ಅರ್ಥಗಾರಿಕೆಯ ವರಸೆಯನ್ನು ಕಲಿಸಿದ ಗುರು. ಆದ ಕಾರಣ ಆವರು ಪರಿಪೂರ್ಣ ಕಲಾವಿದನೆನಿಸಿಕೊಂಡಿದ್ದಾರೆ.
ಸುರತ್ಕಲ್ ಮೇಳದಲ್ಲಿಯೇ 40 ವರ್ಷಗಳ ಕಾಲ ಬಣ್ಣ ಹಚ್ಚಿದ್ದ ಜೋಗಿ ಮುಂದೆ ಕೂಡ್ಲು, ಕರ್ನಾಟಕ, ಮಂಗಳಾದೇವಿ, ಮೂಲ್ಕಿ, ಕುಂಟಾರು ಮೇಳಗಳಲ್ಲಿ ಕಲಾ ಪ್ರೌಢಿಮೆ ತೋರಿ ಕಳೆದ 15 ವರ್ಷಗಳಿಂದ ಹೊಸ ನಗರ ಮೇಳದಲ್ಲಿಪ್ರಧಾನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿವರಾಮ ಜೋಗಿಯವರು ಯುವಕರಗಿದ್ದ ಕಾಲದಲ್ಲಿ ಬಣ್ಣದ ವೇಷ, ಪುಂಡು ವೇಷಗಳಲ್ಲಿ ಹೆಸರುವಾಸಿಯಾಗಿದ್ದರು. ಅದರಲ್ಲಿಯೂ ಜೋಗಿಯವರ ಋತುಪರ್ಣ, ಹನುಮಂತ, ವಾಲಿ, ಇಂದ್ರಜಿತು, ಕರ್ಣ, ಭೀಷ್ಮ, ಕೋಟಿ, ಕಾಂತಬಾರೆ, ದೇವುಪೂಂಜ, ವೀರಚಂದ್ರ, ಕುಮಾರ ರಾಮ, ಬಪ್ಪ ಬ್ಯಾರಿ ಪಾತ್ರಗಳು ಸದಾ ಯಕ್ಷ ಪ್ರಯಿರ ಮಸ್ತಕದಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಅಗರಿದ್ವಯ ಭಾಗವತರು, ಶಂಕರನಾರಾಯಣ ಸಾಮಗ, ಶೇಣಿ, ತೆಕ್ಕಟ್ಟೆ ಆನಂದ ಮಾಸ್ತರ್, ರಾಮದಾಸ ಸಾಮಗ, ಕುಂಬ್ಳೆ, ಕೋಳ್ಯೂರು, ಕಡಬ ನಾರಾಯಣ ಆಚಾರ್ಯ ಇನ್ನಿತರ ಘಟಾನುಘಟಿ ಕಲಾವಿದರೊಂದಿಗೆ ಕುಣಿದವರು. ಪದಕ್ಕೆ ಹೆಜ್ಜೆ ಹಾಕಿದವರು.
ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೀಲಾರು ಪ್ರಶಸ್ತಿ, ಶೇಣಿ ಪ್ರಶಸ್ತಿ, ಕುರಿಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ರಾಜ್ಯೋತ್ಸವ ಪ್ರಶಸ್ತಿ ಜೋಗಿಯವರ ಕಲಾ ಸೇವೆಗೆ ಮುಕುಟಪ್ರಾಯವಾಗಿ, ಸಕಾಲಿಕವಾಗಿ ಸಂದಿದೆ.
ಕಿಶೋರ್ ಪೆರಾಜೆ.