ಬಂಟ್ವಾಳ:ತಾಲ್ಲೂಕಿನ ಕೊಡ್ಮಾಣ್ ಸಮೀಪದ ನಡುಬೈಲು ಎಂಬಲ್ಲಿ ಗದ್ದೆ ಬದಿ ಇರುವ ಗುಡ್ಡವೊಂದರಲ್ಲಿ ಉರುಳಿಗೆ ಸಿಲುಕಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.ಇಲ್ಲಿನ ಕೃಷಿಕರ ಗದ್ದೆಗೆ ಬಂದು ಬೆಳೆ ಹಾನಿಗೊಳಿಸುತ್ತಿರುವ ಮುಳ್ಳುಹಂದಿ ಮತ್ತು ಕಾಡು ಹಂದಿ ಮತ್ತಿತರ ಕಾಡು ಪ್ರಾಣಿಗಳಿಗಾಗಿ ಸ್ಥಳೀಯರು ಗುಡ್ಡ ಪ್ರದೇಶದಲ್ಲಿ ಉರುಳು ಇಟ್ಟಿದ್ದಾರೆ ಎನ್ನಲಾಗಿದೆ.
ಶುಕ್ರವಾರ ತಡರಾತ್ರಿ ಆಹಾರ ಹುಡುಕಿಕೊಂಡು ಬಂದಿದ್ದ ಚಿರತೆ ಈ ಉರುಳಿಗೆ ಸಿಲುಕಿ ಕೆಲಹೊತ್ತು ಒದ್ದಾಟ ನಡೆಸಿ ಬಳಿಕ ಸಾವನ್ನಪ್ಪಿದೆ. ಸುತ್ತಲೂ ಅರಣ್ಯ ಪ್ರದೇಶ ಹೊಂದಿರುವ ಇಲ್ಲಿ ಮನೆಗಳ ಸಂಖ್ಯೆ ವಿರಳವಾಗಿದ್ದು, ಶನಿವಾರ ಬೆಳಿಗ್ಗೆ ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಉಮೇಶ್ ಕುಮಾರ್ ನೇತೃತ್ವದ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಧಾವಿಸಿ ಬಂದು ಚಿರತೆಯನ್ನು ಅಲ್ಲಿಂದ ತೆರವುಗೊಳಿಸಿರುವುದಾಗಿ ತಿಳಿಸಿದ್ದಾರೆ.
