ಬಂಟ್ವಾಳ : ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಸಿಡಿಲಿನಿಂದ ಗೆ ತೀವ್ರ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮೂಡುಪಡುಕೋಡಿ ಗ್ರಾಮದ ಎರ್ಮೆನಾಡುವಿನ ಯೋಗೀಶ ನಾಯ್ಕ ಅವರ ಮನೆಗೆ ತಡರಾತ್ರಿ ಸುಮಾರು 2.30 ಗಂಟೆಯ ಹೊತ್ತಿಗೆ ಸಿಡಿಲು ಬಡಿದಿದ್ದು, ಮನೆಯ ವಿದ್ಯುತ್ ಸಂಪರ್ಕ ಸಂಪೂರ್ಣ ಹಾನಿಗೀಡಾಗಿದೆ. ಫ್ಯಾನ್, ವಯರಿಂಗ್, ಮೀಟರ್ ಬೋರ್ಡ್, ಟಿ.ವಿ. ಸುಟ್ಟು ಹೋಗಿದೆ.
ಅಡುಗೆ ಮನೆಯಲ್ಲಿದ್ದ ಅಲ್ಯುಮೀನಿಯಂ ಪಾತ್ರೆಗಳೂ ಕರಟಿದೆ. ಯೋಗೀಶ್ ಅವರ ತಾಯಿ ವಸಂತಿ ಅವರು ಮಲಗಿದ್ದ ಚಾಪೆ ಭಾಗಶ: ಸುಟ್ಟಿದೆ. ಮನೆಯ ಗೋಡೆ ಬಿರುಕು ಬಿಟ್ಟಿದೆ. ಕಿಟಕಿ ಗಾಜುಗಳು ಒಡೆದಿದೆ. ಸಿಡಿಲಿನಿಂದ ಮನೆಯ ಹೊರಭಾಗದ ನೆಲದ ಮಣ್ಣು ಯಂತ್ರದಲ್ಲಿ ಕೊಚ್ಚಿ ಹಾಕಿದಂತಾಗಿದ್ದು, ಕೆಸರು ಗೋಡೆಯ ಮೇಲಕ್ಕೆ ಎರಚಿದಂತಾಗಿದೆ. ಇಲ್ಲಿದ್ದ ಸುಮಾರು 2 ಕ್ವಿಂಟಾಲ್ ಭಾರದ ಕಲ್ಲೊಂದು ಸುಮಾರು 50 ಮೀ. ದೂರಕ್ಕೆ ಚಿಮ್ಮಿರುವುದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.
ಜಿ.ಪಂ. ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಬಿ. ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿಲ್ಲಾ ಹಾಪ್ಕಾಮ್ ಅಧ್ಯಕ್ಷ ಲಕ್ಷ್ಮಿ ನಾರಾಯಣ ಉಡುಪ, ತಾ.ಪಂ. ಸದಸ್ಯ ರಮೇಶ್ ಕುಡ್ಮೇರು, ಗ್ರಾ.ಪಂ. ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್, ಪಿಡಿಒ ಗಣೇಶ್ ಶೆಟ್ಟಿಗಾರ್, ಕಂದಾಯ ಇಲಾಖಾಧಿಕಾರಿಗಳು, ಪುಂಜಾಲಕಟ್ಟೆ ಠಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯ ಶಿವಾಜಿ ಫ್ರೆಂಡ್ಸ್ ಅಧ್ಯಕ್ಷ ಹರೀಶ್ ಪೂಜಾರಿ ಮತ್ತು ಸದಸ್ಯರು ಮನೆಯನ್ನು ಸ್ವಚ್ಛಗೊಳಿಸುವಲ್ಲಿ ಸಹಕರಿಸಿದರು. ಗ್ರಾ. ಪಂ. ವತಿಯಿಂದ ವಿದ್ಯುತ್ ಸೌಲಭ್ಯ ಒದಗಿಸಿಕೊಡುವುದಾಗಿ ಉಪಾಧ್ಯಕ್ಷ ತಿಳಿಸಿದ್ದಾರೆ.
