ಬಂಟ್ವಾಳ: ಪುಂಜಾಲಕಟ್ಟೆಯ ಶ್ರೀ ಶಾರದಾಂಬ ಯುವಕ ಮಂಡಲದ 41ನೇ ವರ್ಷದ ಶ್ರೀ ಶಾರದಾ ಪೂಜೆ ಪುಂಜಾಲಕಟ್ಟೆ ಶ್ರೀ ಶಾರದಾ ಪೂಜಾ ಮಂಟಪದಲ್ಲಿ ಸೆ. 27 ಅ. 1ವರೆಗೆ ಜರಗಲಿದೆ.
ಸೆ. 27 ರಂದು ಬೆಳಗ್ಗೆ ಶ್ರೀ ಶಾರದಾ ಸಭಾ ಭವನದ ಉದ್ಘಾಟನೆ ನಡೆಯಲಿದ್ದು, ಉದ್ಯಮಿ ಬಿ.ಪುರುಷೋತ್ತಮ ಬಾಳಿಗ ಉದ್ಘಾಟಿಸಲಿರುವರು. ಬಳಿಕ ಶ್ರೀ ಸತ್ಯನಾರಾಯಣ ಪೂಜಾರಂಭ, ಮಧ್ಯಾಹ್ನ ಶ್ರೀ ಶಾರದಾ ಪ್ರತಿಷ್ಠೆ, ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಭಜನೆ, ರಾತ್ರಿ ಮಹಾಪೂಜೆ, ಬಳಿಕ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಸೆ. 28 ರಂದು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ಮಧ್ಯಾಹ್ನ ಪೂಜೆ, ಸಂಜೆ ಭಜನೆ ನಡೆಯಲಿದೆ. ಬಳಿಕ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.
ಸೆ. 29ರಂದು ಮಂಗಳೂರು ಪದವಿನಂಗಡಿ ಲೋಕೇಶ್ ಆಚಾರ್ಯ ಅವರಿಂದ ಧಾರ್ಮಿಕ ಉಪನ್ಯಾಸ, ವಿಶೇಷ ಹೂವಿನ ಪೂಜೆ, ಸಂಜೆ ಭಜನೆ, ಆಯುಧ ಪೂಜೆ, ರಾತ್ರಿ ಮಹಾಪೂಜೆ ನಡೆಯಲಿದೆ. ಕಾವಳಕಟ್ಟೆ ನಾಟ್ಯಲಹರಿ ಕಲಾವಿದರಿಂದ ನಾಟ್ಯ ಶ್ಯಾಮಲೋತ್ಸವ ನಡೆಯಲಿದೆ. ಸೆ. 30 ರಂದು ಬೆಳಗ್ಗೆ ಮಕ್ಕಳಿಗೆ ಅಕ್ಷರಾಭ್ಯಾಸ,ಮಧ್ಯಾಹ್ನ ಪೂಜೆ, ಸಂಜೆ ಭಜನೆ, ಮಹಾಪೂಜೆ, ಬಳಿಕ ನಿಕ್ಲು ಎನ್ನಿಲೆಕತ್ತ್ ಎಂಬ ತುಳು ನಾಟಕ ನಡೆಯಲಿದೆ, ಬಳಿಕ ವಿಸರ್ಜನಾ ಆರತಿ ನಡೆಯಲಿದೆ. ಅ.1 ರಂದು ಸಂಜೆ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
