ಬಂಟ್ವಾಳ: ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಏಕಕಾಲದಲ್ಲೇ ಮನೆ ಮನೆಗೆ ಕಾಂಗ್ರೆಸ್ ನಡಿಗೆಗೆ ಶನಿವಾರ ಚಾಲನೆ ನೀಡಲಾಗಿದ್ದು, ಕಾರ್ಯಕರ್ತರು ಕ್ಷೇತ್ರಾದ್ಯಂತ ಮನೆ, ಮನೆಗೆ ತೆರಳಿ ಮನೆಮಂದಿಯೊಂದಿಗೆ ಸಾವಕಾಶವಾಗಿ ಕುಳಿತು ಸರಕಾರದ ಜನಪರ ಯೋಜನೆಗೆಳ ಬಗ್ಗೆ ಮಾಹಿತಿ ನೀಡಬೇಕು ಎಂದು ಎಐಸಿಸಿ ಕಾರ್ಯದರ್ಶಿ ಪಿ.ಎಸ್. ವಿಷ್ಣುನಾಥ್ ಕರೆನೀಡಿದ್ದಾರೆ.
ಬಿ.ಸಿ.ರೋಡಿನಲ್ಲಿ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ವತಿಯಿಂದ ಶನಿವಾರ ಸಂಜೆ ನಡೆದಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೂತ್ ಸಮಿತಿಯನ್ನು ಸಚಿವ ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ ಶೇ. 100ರಷ್ಟು ಸಮಿತಿಯನ್ನು ರಚನೆಯಾಗಿರುವುದು ಶ್ಲಾಘನೀಯ ಎಂದರು. ತುಘಲಕ್‍ಗೆ ಇನ್ನೊಂದು ಹೆಸರು ಮೋದಿ. ಕರ್ನಾಟಕದಲ್ಲೂ ಬಿಜೆಪಿ ಆಡಳಿತದಲ್ಲಿದ್ದಾಗ ಜೈಲಿಗೆ ಹೋದ ಸಚಿವರ ಇತಿಹಾಸ ಇತ್ತೇ ಹೊರತು, ಜನಪರ ಕಾರ್ಯಗಳು ನಡೆದಿಲ್ಲ. ಕೋಮು ಆಧಾರದಲ್ಲಿ ಬಿಜೆಪಿಯವರು ವಿಭಜನೆಯ ರಾಜಕೀಯ ಮಾಡುತ್ತಿದ್ದಾರೆ. ಆದರೆ ಬಸವಣ್ಣನ ನಾಡಾದ ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ ಎಂದರು.

ಸಿದ್ದರಾಮಯ್ಯ ಅವರು ಹಲವಾರು ಭಾಗ್ಯಗಳನ್ನು ನೀಡುವುದರ ಜೊತೆಗೆ ಪ್ರಣಾಳಿಕೆಯಲ್ಲಿ ನೀಡಿರುವ 159 ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ನುಡಿದಂತೆ ನಡೆದಿದ್ದಾರೆ ಎಂದ ಅವರು ಪ್ರಧಾನಿ ಮೋದಿ ಕಪ್ಪುಹಣ ತರುವುದಾಗಿ ಹೇಳಿದವರು ಇನ್ನು ತರಲಿಲ್ಲ, ಕೇವಲ ಮಾತಿನಲ್ಲಿಯೇ ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಎಲ್ಲ ವರ್ಗದ ಜನರನ್ನು ಸಮಾನಾಗಿ ಕಾಣುವ, ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವ ಮತ್ತು ಕಾರ್ಯಕರ್ತರ, ಜನರ ನಡುವೆ ಬೆರೆಯುವ ಜಾತ್ಯಾತೀತ ನಿಲುವಿನ ಸಚಿವ ರಮಾನಾಥ ರೈ ಅವರ ರಾಜೀನಾಮೆ ಕೇಳುವ ನೈತಿಕತೆ ಯಾರಿಗೂ ಇಲ್ಲ. ಅವರೊಂದಿಗೆ ಕಾಂಗ್ರಸ್ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಅವರು ಘೋಷಿಸಿದರು.
ಕಾರ್ಯಕರ್ತರು ಕೇಳಿದರೆ ರಾಜೀನಾಮೆ:
ಸಚಿವ ರಮಾನಾಥ ರೈ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೋಮುವಾದಿ ಸಿದ್ಧಾಂತ ಇರುವ ಪಕ್ಷಗಳು ನನ್ನ ರಾಜೀನಾಮೆಯನ್ನು ಕೇಳುತ್ತಿವೆ. ನಾನು ಯಾಕಾಗಿ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದ ಸಚಿವ ರೈ, ಒಂದು ವೇಳೆ ನನ್ನದೇ ಪಕ್ಷದ ಕಾರ್ಯಕರ್ತರು ಕೇಳಿದರಷ್ಟೇ ನೀಡುತ್ತೇನೆ ಎಂದರು. ಬಂಟ್ವಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಜನರು 7ನೇ ಬಾರಿಗೂ ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ನಾನು ಮಾಡಿರುವ ಅಭಿವೃದ್ಧಿ ಕಾರ್ಯ ಮತ್ತು ಪ್ರಾಮಾಣಿಕ ಕೆಲಸಕ್ಕೆ ಮುಂದಿನ ಚುನಾವಣೆಯಲ್ಲಿ ಕೂಲಿ ನೀಡಿ ಎಂದು ವಿನಂತಿಸಿದರು.
ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡುವ ಸಂಸದ ನಳಿನ್ ಕುಮಾರ್ ಕಟೀಲ್ ಕಳಪೆ ಸಾಧನೆ ಮಾಡಿದವರು. ಅವರನ್ನೇ ಬಿಜೆಪಿಯವರು ನಂ.1 ಸಂಸದ ಎನ್ನುತ್ತಾರೆ. ಹಾಗಾದರೆ ಅವರ ಪಕ್ಷದ ಇತರ ಸಂಸದರ ಸ್ಥಿತಿ ಹೇಗಿದ್ದೀತು ಎಂದು ಯೋಚನೆ ಮಾಡಿ ಎಂದು ಲೇವಡಿ ಮಾಡಿದ ರೈ, ಕೋಮುವಾದಿ ಸಿದ್ಧಾಂತವಾದಿಗಳು ಕಾಂಗ್ರೆಸ್ ನವರನ್ನು ಜಿಲ್ಲೆಯಲ್ಲಿ ಆದ ಹತ್ಯೆಗಳಿಗೆ ಹೊಣೆ ಮಾಡಿದರು. ಆದರೆ ದೇವರ ದಯೆಯಿಂದ ಹತ್ಯೆ ಆರೋಪಿಗಳು ಬಂಧನವಾಗಿದ್ದು, ಅದರಲ್ಲಿ ಕಾಂಗ್ರೆಸ್ ಪಾತ್ರ ಇಲ್ಲ ಎಂದು ಸಾಬೀತಾಗಿದೆ. ತಪ್ಪು ಮತ್ತು ನನ್ನ ವಿರುದ್ಧ ಅಪಪ್ರಚಾರ ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ದೇವರ ಮೊರೆ ಹೋದರು.
ಅ.24ರಂದು ಸಾಮರಸ್ಯದ ನಡಿಗೆ:
ಅಕ್ಟೋಬರ್ ಮೊದಲು ಇಲ್ಲವೆ ಎರಡನೇ ವಾರದಲ್ಲಿ ಮುಖ್ಯಮಂತ್ರಿಯವರು ಬಂಟ್ವಾಳಕ್ಕಾಗಮಿಸಿ ಹತ್ತುಹಲವು ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸುವರು ಎಂದ ರೈ, ಅ.24ರಂದು ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯದ ನಡಿಗೆ ನಡೆಯಲಿದೆ, ಬಿಜೆಪಿ, ಎಸ್‍ಡಿಪಿಐಗೆ ಇದರಲ್ಲಿ ಅವಕಾಶವಿಲ್ಲ, ಜಾತ್ಯತೀತ ಮನಸ್ಸುಗಳಿಗಷ್ಟೇ ಇಲ್ಲಿ ಅವಕಾಶ ಎಂದರು.ಸಚಿವ ಯು.ಟಿ.ಖಾದರ್,ಮಾತನಾಡಿ ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತರ ಉತ್ಸಾಹ ,ಶ್ರಮದಿಂದ ಜಿಲ್ಲಯ ಎಂಟು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಲಿದೆ ಎಂದರು.
ಅಶ್ವನಿಗೆ ಆಹ್ವಾನವಿಲ್ಲ:
ಈ ಸಮಾವೇಶಕ್ಕೆ ಇಲ್ಲಿನವರೇ ಆಗಿರುವ ಕೆಪಿಸಿಸಿ ಕಾರ್ಯದರ್ಶಿಯವರೊಬ್ಬರ ಪೈಕಿ ಬಿ.ಸಿ.ರೋಡಿನ ವಕೀಲ ಅಶ್ವನಿ ಕುಮಾರ್ ರೈ ಆಹ್ವಾನವೇ ನೀಡದಿರುವುದು ಬೆಳಕಿಗೆ ಬಂದಿದೆ. ತಾಲೂಕಿನಿಂದ ಮೂವರನ್ನು ಕೆಪಿಸಿಸಿಗೆ ಕಾರ್ಯದರ್ಶಿಯಾಗಿ ಇತ್ತೀಚೆಗೆ ನೇಮಿಸಲಾಗಿತ್ತು. ಈ ಪೈಕಿ ಅಶ್ವನಿ ಕುಮಾರ್ ರೈ ಅವರೂ ಕೂಡಾ ಒಬ್ಬರು. ಆದರೆ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್‍ನಿಂದ ನಡೆದ ಸಮಾವೇಶಕ್ಕೆ ಈ ಎರಡೂ ಸಮಿತಿಗಳು ಆಹ್ವಾನ ನೀಡಲಿಲ್ಲ ಎಂದು ಅಶ್ವನಿ ಕುಮಾರ್ ತಿಳಿಸಿದ್ದಾರೆ.
ನನಗೆ ಮೈಸೂರಿನಲ್ಲಿ ಮನೆ ಮನೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮದ ಜವಾಬ್ದಾರಿಯನ್ನು ಪಕ್ಷ ನೀಡಿದ್ದು, ಸದ್ಯ ನಾನು ಮೈಸೂರಿನ ಪಿರಿಯಾಪಟ್ಟಣ ಮತ್ತು ಕೆ.ಆರ್. ಪೇಟೆ ಭಾಗಗಳಲ್ಲಿ ಈ ಕಾರ್ಯಕ್ರಮದಲ್ಲಿ ನಿರತನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸಭಾಧ್ಯಕ್ಷತೆ ವಹಿಸಿದ್ದರು.ಶಾಸಕ ಮೊಯಿದ್ದೀನ್ ಬಾವ, ವಿಧಾನಪರಿಷತ್ತು ಮುಖ್ಯ ಸಚೇತಕ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಕೆಪಿಸಿಸಿ ಕ್ಷೇತ್ರ ಉಸ್ತುವಾರಿ ರಾಜಕುಮಾರ್, ಮುಖಂಡರಾದ ಬಿ.ಎಚ್.ಖಾದರ್, ಪಿಯೂಸ್ ಎಲ್. ರೋಡ್ರಿಗಸ್, ಹಾಜಿ ಮೋನು, ಎ.ಸಿ.ಭಂಡಾರಿ, ಎಂ.ಎಸ್.ಮಹಮ್ಮದ್, ಮಮತಾ ಗಟ್ಟಿ, ನವೀನ್ ಡಿಸೋಜ, ಕೋಡಿಜಾಲ್ ಇಬ್ರಾಹಿಂ, ಚಂದ್ರಹಾಸ ಕರ್ಕೇರ, ಮಿಥುನ್ ರೈ, ಕರೀಂ, ರಾಮಕೃಷ್ಣ ಆಳ್ವ, ಲುಕ್ಮಾನ್, ಜನಾರ್ದನ ಚಂಡ್ತಿಮಾರ್, ಪ್ರಶಾಂತ್ ಕುಲಾಲ್, ಸದಾಶಿವ ಬಂಗೇರ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಧನಲಕ್ಷ್ಮೀ ಬಂಗೇರ, ಸುರೇಂದ್ರ ಕಂಬಳಿ, ಕುಂಞ ಮೋನು, ಮಲ್ಲಿಕಾ ಪಕ್ಕಳ, ಮಂಜುಳಾ ಮಾವೆ, ಲಾವಣ್ಯ ಬಲ್ಲಾಳ್, ಹಿತಲಕ್ಷ್ಮೀ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ ಸ್ವಾಗತಿಸಿದರು.
