ಬಂಟ್ವಾಳ:ಇಲ್ಲಿನ ಪುರಸಭಾ ಆಡಳಿತದ ವಿರುದ್ಧದ 15 ಆರೋಪಗಳನ್ನೊಳಗೊಂಡ ಆರೋಪಪಟ್ಟಿಯನ್ನು ವಿಪಕ್ಷ ಬಿಜೆಪಿ ಸದಸ್ಯರು ಶನಿವಾರ ಬಿ.ಸಿ.ರೋಡ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.
ರಾಜ್ಯ ಅರಣ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಸ್ವಕ್ಷೇತ್ರವಾದ ಬಂಟ್ವಾಳ ಕ್ಷೇತ್ರದ ಪುರಸಭೆ ಭ್ರಷ್ಟಾಚಾರದಲ್ಲಿ ರಾಜ್ಯದ ನಂ.1 ಪುರಸಭೆ ಎನ್ನುವ ಕುಖ್ಯಾತಿ ಪಡೆದಿದೆ ಎಂದು ಬಿಜೆಪಿ ಸದಸ್ಯ ದೇವದಾಸ್ ಶೆಟ್ಟಿ ಆರೋಪಿಸಿದರು.
ಆಡಳಿತ ಪಕ್ಷದ ಜವಾಬ್ದಾರಿ ಸ್ಥಾನದಲ್ಲಿರುವ ಸದಸ್ಯರೊಬ್ಬರು ಇದಕ್ಕೆ ಪುಷ್ಠಿ ನೀಡುವಂತೆ ಲಿಖಿತ ಪತ್ರವನ್ನು ನೀಡಿದ್ದಾರೆ ಎಂದ ಅವರು, ಬಂಟ್ವಾಳ ಪುರಸಭೆಯಲ್ಲಿ ಕಸ ಸಂಗ್ರಹ, ತ್ಯಾಜ್ಯ ನಿರ್ವಹಣೆ ಮತ್ತಿತರ ವಿಚಾರದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಈ ಪ್ರಕರಣ ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

23 btl shetty
ಪುರಸಭೆಯಲ್ಲಿ ಹತ್ತಾರು ಹಗರಣ ನಿಯಮಬಾಹಿರ, ಕಾನೂನು ಉಲ್ಲಂಘಿಸಿದ ಬಗ್ಗೆ ಸಾಕಷ್ಟು ಲಿಖಿತ ದೂರುಗಳನ್ನು ನೀಡಲಾಗಿದ್ದರೂ ಜಿಲ್ಲಾಡಳಿವಾಗಲಿ ಅವರ ಮೇಲಾಧಿಕಾರಿಗಳಾಗಲಿ ಈವರೆಗೂ ಒಂದೇ ಒಂದು ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದ ಅವರು, ನ್ಯಾಯ ಸಮ್ಮತವಾಗಿ ಕೆಲಸ ಮಾಡುವ ಅಧಿಕಾರಿಗಳ “ಕೈ” ಕಟ್ಟಿಹಾಕಿದವರು ಯಾರು? ಎಂಬುದು ಜನರಿಗೆ ತಿಳಿದಿದೆ ಎಂದರು.
ತಿಂಗಳಿಗೆ 7-8 ಲಕ್ಷ ರೂ. ಕಸ ವಿಲೇವಾರಿಗೆ ಖರ್ಚಾದರೂ ಕಸ ಮಾತ್ರ ರಸ್ತೆ ಬದಿಯಲ್ಲೇ ಇರುವುದಕ್ಕೆ ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿಯೂಸ್ ರೋಡ್ರಿಗಸ್ ಅವರು ಪರಿಶೀಲನೆ ಸಂದರ್ಭ ಗಮನಿಸಿರುವುದು ನಿದರ್ಶನವಾಗಿದೆ. ಒಳಚರಂಡಿ ಕಾಮಗಾರಿ ನಡೆದರೂ ಶೌಚಾಲಯ, ಚರಂಡಿ ನೀರು ನೇತ್ರಾವತಿ ನದಿ ಸೇರಿದನ್ನೇ ಕುಡಿಯಬೇಕು. ವಸತಿ ಬಡಾವಣೆಗೆ ಅನುಮತಿ ನೀಡಿದರೂ ಬಡಾವಣೆಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಬಿಡಬೇಕಾದ ಸ್ಥಳ ಬೇರೆಯವರಿಗೆ ಮಾರಾಟವಾಗುತ್ತಿದೆ. ಪುರಸಭೆಯ ನಿರ್ಣಯ ಪುಸ್ತಕ ಮುಖ್ಯಾಧಿಕಾರಿಯ ಅಧೀನದಲ್ಲಿರಬೇಕು. ಆದರೆ ಇಲ್ಲಿ ಅದನ್ನು ಪಾಲಿಸಲಾಗುತ್ತಿಲ್ಲ. ಕಸಸಂಗ್ರಹಣೆಗೆ ಬಕೆಟ್ ಬಂದಿದ್ದರೂ ಸುಮಾರು 10ಸಾವಿರದಷ್ಟು ಬಕೆಟ್ ಗೋದಾಮಿನಲ್ಲಿ ಧೂಳು ತಿನ್ನುತ್ತಿದೆ. ಬಜೆಟ್‍ನಲ್ಲೂ ಅವ್ಯವಹಾರ, ಲೋಪದೋಷ ಕಂಡು ಬಂದಿದೆ. ಬಸ್ ನಿಲ್ದಾಣ ನಿರ್ಮಿಸಿದರೂ ರಸ್ತೆಯಲ್ಲೇ ಬಸ್ ನಿಲ್ಲುತ್ತದೆ. ಪ್ಲ್ಯಾಸ್ಟಿಕ್ ಫ್ಲೆಕ್ಸ್ ನಿಷೇಧಿಸಿದ್ದರೂ ಕಾಂಗ್ರೆಸ್ ಪಕ್ಷದ ಫ್ಲೆಕ್ಸ್ ಊರಿಡಿ ರಾರಾಜಿಸುತ್ತಿದೆ. ಆಡಳಿತ ನಡೆಸುವವರು ಪ್ರಶ್ನಾತೀತರು ಎಂದು ಕೊಂಡಂತಿದೆ ಎಂದು ಅವರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಪರಿಸರ ಸಚಿವರಾಗಿ ವಿಫಲ:
ರಮಾನಾಥ ರೈ ಅವರು ರಾಜ್ಯದ ಪರಿಸರ ಸಚಿವರಾಗಿದ್ದು, ಆ ಹುದ್ದೆಯನ್ನು ನಿರ್ವಹಿಸಲು ಸಂಪೂರ್ಣ ವಿಫಲರಾಗಿದ್ದಾರೆ. ಬಂಟ್ವಾಳದಲ್ಲಿ ತ್ಯಾಜ್ಯ, ಕಸ ನಿರ್ವಹಣೆ, ಪ್ಲಾಸ್ಟಿಕ್ ಮುಕ್ತಗೊಳಿಸಲು ಇನ್ನೂ ಯಶಸ್ವಿಯಾಗಿಲ್ಲ ಎಂದವರು ಟೀಕಿಸಿದರು.
ಬಿಜೆಪಿ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ರುಕ್ಮಯ ಪೂಜಾರಿ, ಸುಲೋಚನಾ ಜಿ.ಕೆ. ಭಟ್, ಜಿ.ಆನಂದ, ದಿನೇಶ್ ಭಂಡಾರಿ, ರಾಮದಾಸ ಬಂಟ್ವಾಳ, ಭಾಸ್ಕರ ಟೈಲರ್, ಸಂಧ್ಯಾ, ಸುಗುಣ ಕಿಣಿ, ರಾಜಾರಾಮ ನಾಯಕ್, ರೊನಾಲ್ಡ್ ಡಿಸೋಜ, ಮೋನಪ್ಪ ದೇವಸ್ಯ, ಸೀತಾರಾಮ ಪೂಜಾರಿ, ದೇವಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *