ಬಂಟ್ವಾಳ: ಜೋತಿಷ್ಯಾಲಯಗಳ ವಿರುದ್ಧ ನೇರ ಕ್ರಮಕೈಗೊಳ್ಳಲು ಕಾನೂನಿನಲ್ಲಿ ನಮಗೆ ಅವಕಾಶವಿಲ್ಲ. ಜೋತಿಷ್ಯಗಳಿಂದ ಮೋಸ ಹೋಗದಂತೆ ನೋಡಿಕೊಳ್ಳುವುದು ಅವರವರೇ ಜವಾಬ್ದಾರಿ ಎಂದು ದ.ಕ. ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ರವಿವಾರ ನಡೆದ ಜಿಲ್ಲಾ ಮಟ್ಟದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡ ವಿಶ್ವನಾಥ್ ಚೆಂಡ್ತಿಮಾರ್, ಜಿಲ್ಲೆಯಲ್ಲಿ ಜೋತಿಷ್ಯಾಲಯಗಳು ಹೆಚ್ಚುತ್ತಿದ್ದು ಅವರಿಂದ ಜನರು ಮೋಸ ಹೋಗುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿ ಎಸ್ಪಿ, ಭವಿಷ್ಯ ಅರಿಯಲು ಯಾರಾದರೂ ಜೋತಿಷ್ಯರ ಬಳಿ ಹೋಗುವುದು ಅವರ ವೈಯಕ್ತಿಕ ವಿಚಾರವಾಗಿದೆ. ಜೋತಿಷ್ಯರ ಬಳಿ ಹೋಗುವವರನ್ನು ನಿಲ್ಲಿಸುವುದು ಅಥವಾ ಜೋತಿಷ್ಯಾಲವನ್ನು ಬಂದ್ ಮಾಡಿಸುವುದು ಸಾಧ್ಯವಿಲ್ಲ. ಜೋತಿಷ್ಯರಿಂದ ಮೋಸ ಹೋದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮರಳಿನ ಕೊರತೆಯಿಂದಾಗಿ ಆಶ್ರಯ ಯೋಜನೆಯಲ್ಲಿ ಮಂಜೂರಾದ ಮನೆಗಳ ಕಾಮಗಾರಿ ಸ್ಥಗಿತಗೊಂಡಿದೆ ಎಂದು ರಾಜ ಪಲ್ಲಮಜಲು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಮುಟ್ಟುಗೋಳು ಹಾಕಿರುವ 500ರಷ್ಟು ಲೋಡ್ ಮರಳು ಇಲಾಖೆಯ ಬಳಿ ಇದೆ. ಗಣಿ ಇಲಾಖೆಯ ಸಂಬಂಧಿಸಿದ ಅಧಿಕಾರಿಯಿಂದ ಪತ್ರ ತಂದರೆ ಮನೆ ನಿರ್ಮಾಣಕ್ಕೆ ಬೇಕಾದಷ್ಟು ಮರಳು ಸರಕಾರ ನಿಗದಿ ಮಾಡಿರುವ ದರದಲ್ಲಿ ನೀಡಲಾಗುವುದು ಎಂದು ಹೇಳಿದರು.
ಬಂಟ್ವಾಳ ಪೇಟೆಯ ರಸ್ತೆ ಕಿರಿದಾಗಿದ್ದು ನಿತ್ಯ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಸರಕಾರಿ ಬಸ್ ಪೇಟೆಯ ಮೂಲಕ ಹೋಗುವಾಗ ಇನ್ನಷ್ಟು ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಟ್ರಾಫಿಕ್ ಜಾಮ್‍ನಿಂದ ವಾಹನಗಳ ಮಧ್ಯೆ ಸಂಭವಿಸುವ ಢಿಕ್ಕಿ ಬಳಿಕ ಜಗಲಕ್ಕೆ ಕಾರಣವಾಗುತ್ತಿದೆ. ರಸ್ತೆಯ ಇಕ್ಕೆಲೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ವಾಹನಗಳ ಚಕ್ರಗಳಿಗೆ ಲಾಕ್ ಹಾಕಿ ದಂಡ ವಿಧಿಸಬೇಕು ಎಂದು ವಿಶ್ವನಾಥ್ ಚೆಂಡ್ತಿಮಾರ್ ಆಗ್ರಹಿಸಿದರು. ಇದೇ ವೇಳೆ ಬಂಟ್ವಾಳ ಪೇಟೆ ರಸ್ತೆಯನ್ನು ಅತಿಕ್ರಮಿಸಿದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದರೆ ಸಮಸ್ಯೆ ಪರಿಹಾರವಾಗಲಿದೆ ಎಂದು ರಾಜ ಪಲ್ಲಮಜಲು ಸಲಹೆ ನೀಡಿದರು. ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಬೇಕಾದ ಕ್ರಮ ಕೈಗೊಳ್ಳಿ. ಸಾಧ್ಯವಾದರೆ ಏಕಮುಖ ಸಂಚಾರದ ವ್ಯವಸ್ಥೆ ಮಾಡಿ ಎಂದು ಬಂಟ್ವಾಳ ಸರ್ಕಲ್ ಇನ್‍ಸ್ಪೆಕ್ಟರ್‍ಗೆ ಸೂಚನೆ ನೀಡಿದರು.
ಬಿ.ಸಿ.ರೋಡ್ ತಲಪಾಡಿಯ ಎರಡು ಗೂಡಂಗಡಿಯಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಯುವಕರು ಗುಂಪು ಸೇರುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು ಒಂದೆರಡು ಬಾರಿ ಪೊಲೀಸರು ಅಲ್ಲಿ ಸೇರುವವರನ್ನು ಓಡಿಸಿದ್ದಾರೆ. ಇದೀಗ ಮತ್ತೆ ಗುಂಪು ಸೇರುತ್ತಿದ್ದಾರೆ ಎಂದು ಗಂಗಾಧರ ಪರಾರಿ ಆರೋಪಿಸಿದರು. ಸ್ಥಳಕ್ಕೆ ಭೇಡಿ ನೀಡಿ ಪರಿಶೀಲನೆ ನಡೆಸಿ ಎಂದು ಸರ್ಕಲ್‍ಗೆ ಎಸ್ಪಿ ಸೂಚನೆ ನೀಡಿದರು.
ಮಣಿ ನಾಲ್ಕೂರು ಗ್ರಾಮದ ದಲಿತ ಬಾಲಕನೋರ್ವನ ಮೇಲೆ ಮೊಬೈಲ್ ಕಳವು ಆರೋಪ ಹೊರಿಸಿದ ಪ್ರಕರಣಕ್ಕೆ ಪೊಲೀಸರು ಬಿ ವರದಿ ಸಲ್ಲಿಸಿರುವ ಬಗ್ಗೆ ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಆ ಬಾಲಕ ಈ ಘಟನೆಯ ಬಳಿಕ ನಾಚಿಕೆಯಿಂದ ಶಾಲೆಯಿಂದ ದೂರ ಉಳಿದಿದ್ದಾನೆ. ಆತನ ಭವಿಷ್ಯ ಮೇಲೆ ದುಷ್ಪರಿಣಾಮ ಬೀರಿದ್ದು ಇದಕ್ಕೆ ಯಾರು ಹೊಣೆ ಎಂದು ದಲಿತ ಮುಖಂಡರು, ದಲಿತ ದೌರ್ಜನ್ಯ ಪ್ರಕರಣಗಳನ್ನು ಸರಿಯಾಗಿ ತನಿಖೆ ಮಾಡದೆ ಎಲ್ಲ ಪ್ರಕರಣಗಳಿಗೂ ಬಿ ವರದಿ ಸಲ್ಲಿಸುವ ಮೂಲಕ ಪ್ರಕರಣಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಹಾಗಾದರೆ ದಲಿತರಿಗೆ ನ್ಯಾಯ ಎಲ್ಲಿದೆ. ಇನ್ನು ಮುಂದೆ ನಮಗೆ ಅನ್ಯಾಯವಾದರೂ ನಾವು ದಲಿತ ದೌರ್ಜನ್ಯದ ಕಾಯ್ದೆಯಡಿ ದೂರು ನೀಡಬಾರದು ಎಂಬ ತೀರ್ಮಾಣಕ್ಕೆ ಬರುತ್ತೇವೆ ಎಂದು ರಾಜ ಪಲ್ಲಮಜಲು ಅಸಮಾಧಾನ ವ್ಯಕ್ತಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ದೂರುದಾರರೊಂದಿಗೆ ಪ್ರತ್ಯೇಕವಾಗಿ ತನ್ನನ್ನು ಸಂಪರ್ಕಿಸುವಂತೆ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸಲಹೆ ನೀಡಿದರು. ಸುಬ್ರಹ್ಮಣ್ಯದಲ್ಲಿ ಮೃತ ದೇಹಗಳ ಸಾಗಟಕ್ಕೆ ಖಾಸಗಿ ಮತ್ತು 108 ಅಂಬ್ಯುಲೆನ್ಸ್ ಅಂಬುಲೆನ್ಸ್ ಬರುದಿಲ್ಲ. ಇದರಿಂದ ಸಮಸ್ಯೆಯಾಗುತ್ತಿದ್ದು ಇಲ್ಲಿಗೆ ಸರಕಾರಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯ ದಲಿತ ಮುಖಂಡರೊಬ್ಬರು ಆಗ್ರಹಿಸಿದರು. ಬೆಳ್ಳಾರೆ ಪೊಲೀಸ್ ಠಾಣೆಗೆ ಒಂದು ವರ್ಷ ಸಂದರೂ ಮೂಲಭುತ ಸಮಸ್ಯೆ ಕಾಡುತ್ತಿದೆ ಎಂದು ಸ್ಥಳೀಯರೊಬ್ಬರು ಗಮನ ಸೆಳೆದರು. ಇಲ್ಲಿಗೆ ಶೀರ್ಘದಲ್ಲೇ ಹೊಸ ಕಟ್ಟಡ ಮಂಜೂರಾಗಲಿದ್ದು ಖಾಲಿ ಇರುವ ಸಿಬ್ಬಂದಿಗಳ ನೇಮಕಾತಿಯೂ ನಡೆಯಲಿದೆ ಎಂದು ಎಸ್ಪಿ ಹೇಳಿದರು.
ಎಎಸ್ಪಿ ಡಾ. ಅರುಣ್ ಕುಮಾರ್, ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್, ಜಿಲ್ಲೆಯ ವಿವಿಧ ಠಾಣೆಯ ಸರ್ಕ್‍ಲ್ ಇನ್‍ಸ್ಪೆಕ್ಟರ್‍ಗಳು, ಎಸ್ಸೈಗಳು ಉಪಸ್ಥಿತರಿದ್ದರು.
