ತುಳುವರ ಸಾಂಪ್ರದಾಯಿಕ ಆಚರಣೆ ಕಂಬಳದ ಕುರಿತು ಒಂದು ಬರಹ, Beauty of Tulunad ಎಂಬ ಫೇಸ್ ಬುಕ್ ಪುಟದಲ್ಲಿ ಪ್ರಕಟವಾಗಿತ್ತು. ಬರಹವು ಕಂಬಳ ಆಚರಣೆಯ ನಿಷೇಧದಿಂದಾಗಿ, ತುಳುನಾಡ ಜನರಿಗೆ ಆಗಿರುವ ನೋವನ್ನು ಬಿತ್ತರಿಸಿತ್ತು. ಕಂಬಳದ ಕುರಿತ ಬರಹವನ್ನು ಓದಿದ ನನಗೆ ಆಚರಣೆಗಳು ನಮ್ಮ ಸಂಪ್ರದಾಯದ ಒಂದು ಭಾಗ ಎನ್ನುವ ಹೇಳಿಕೆ ಮತ್ತೊಮ್ಮೆ ಮನದಟ್ಟಾಯಿತು.kambala
ಕಂಬಳ ನಿಷೇಧ ಯಾಕೆ…?
ಕಂಬಳವು ತುಳುನಾಡ ವಿಶಿಷ್ಟ ಆಚರಣೆಗಳಲ್ಲಿ ಒಂದು. ಇಂತಹ ಕಂಬಳವು ಇಂದು ನಿನ್ನೆಯದಲ್ಲ. ನಮ್ಮ ತಂದೆ-ತಾಯಿಗಳು, ಅಜ್ಜ ಮುತ್ತಜ್ಜಂದಿರು ಆಚರಿಸಿಕೊಂಡು ಬಂದಂತಹ ಒಂದು ಸಂಪ್ರದಾಯ. ಇಂತಹ ಒಂದು ಸಾಂಪ್ರದಾಯಿಕ ಆಚರಣೆಯು ನಮ್ಮಿಂದ ದೂರಾಗಿದೆ. ಆದರೆ ಇಂದಿಗೂ ತುಳುವರ ಜನಮಾನಸದಲ್ಲಿ ಅಚ್ಚಳಿಯದೆಲೇ ಉಳಿದುಕೊಂಡಿದೆ. ಕಂಬಳದಂತೆಯೇ ಉಳಿದ ಸಾಂಪ್ರದಾಯಿಕ ಆಚರಣೆಗಳಿಗೆ ಅಂತ್ಯ ಹಾಡುವ ಪರಿಸ್ಥಿತಿ ಎದುರಾದರೂ ಆಶ್ಚರ್ಯವೇನಿಲ್ಲ. ಕಂಬಳವನ್ನು ನಿಷೇಧಿಸಬೇಕು ಎಂದು ಬಡಬಡಿಸುವವರ ಪ್ರಕಾರ ಮೂಕ ಪ್ರಾಣಿಯಾದ ಕೋಣವನ್ನು ಆಟಕ್ಕೆ ಬಳಸಿಕೊಳ್ಳಲಾಗುತ್ತದೆ, ಆದ್ದರಿಂದ ಇದನ್ನು ನಿಷೇಧಿಸಲೇಬೇಕು ಎನ್ನುವುದು. ಪ್ರಾಣಿ ಹಿಂಸೆ ಮಾಡಬಾರದು ಎನ್ನುವ ವಿರೋಧಿ ಬಣದ ವಾದವನ್ನು ನಾನೂ ಒಪ್ಪುತ್ತೇನೆ. ಆದರೆ ಕಂಬಳದಲ್ಲಿ ಬಳಕೆಯಾಗುವ ಪ್ರಾಣಿಗಳನ್ನು ನೋಡಿದರೆ ಅವುಗಳಿಗೆ ಅದರ ಯಜಮಾನ ಹೊಡೆದು ಬಡಿದು ಹಿಂಸೆ ಮಾಡಿದಂತೆ ತೋರುತ್ತದೆಯೇ? ಪ್ರಾಣಿಗಳನ್ನು ಹೊಡೆದು ಬಡಿದು ಬಗ್ಗಿಸುವುದು ತುಂಬಾ ಕಷ್ಟ. ಅದಕ್ಕೊಂದು ಉದಾಹರಣೆ, ನಾವು ಬೆಂಗಳೂರಿಗೆ ಬಂದು ನೆಲೆ ನಿಂತಾಗ ನನ್ನಮ್ಮನ ಅಳಲು, ಏನೆಂದರೆ ನೋಡುವುದಕ್ಕೂ ಸಹ ಒಂದು ದನ ಕಾಣುವುದಿಲ್ಲವಲ್ಲ ಎಂದು. ಅಕ್ಕ ಪಕ್ಕದ ಬೀದಿಯಲ್ಲಿ ಹೋಗುವಾಗ ದನಗಳನ್ನು ಕಂಡರೆ ಮನೆ ಹತ್ತಿರ ಬರುವುದಿಲ್ಲವಲ್ಲ ಎಂದು ಮಮ್ಮಲ ಮರುಗುತ್ತಿದ್ದರು. ಸ್ವಲ್ಪ ದಿನಗಳ ನಂತರ ಅವುಗಳು ನಮ್ಮ ಮನೆಯ ಕಡೆಯೂ ಪ್ರಯಾಣ ಬೆಳೆಸಿದಾಗ ನನ್ನ ತಾಯಿಗೆ ಇನ್ನಿಲ್ಲದ ಸಂತೋಷ. ನನ್ನ ತಾಯಿ ಕಳೆದ ೪ ವರ್ಷಗಳಿಂದಲೂ ಪ್ರತಿನಿತ್ಯ ದನಗಳಿಗಾಗಿ ಏನನ್ನಾದರೂ ತೆಗೆದಿಡುತ್ತಾರೆ. ಪ್ರಾರಂಭದಲ್ಲಿ ಒಂದಿದ್ದದ್ದು ಇಂದು ೪ ರಿಂದ ೫ ದನಗಳು ನಮ್ಮ ಮನೆಯ ಮುಂದೆ ಬಂದು ನಿಲ್ಲುತ್ತವೆ. ನನ್ನ ತಾಯಿಯವರು ಅವುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಸಹ ಮಾಡಿದ್ದಾರೆ. ಅವುಗಳ ಯಜಮಾನ ಬಂದು, “ಗುದ್ದುತ್ತವೆ, ಜೋಪಾನ” ಎಂದು ಹೇಳಿದಾಗಲೆಲ್ಲಾ ನನ್ನ ತಾಯಿ ಪ್ರೀತಿಯಿಂದ ನೋಡಿಕೊಂಡರೆ ಏನೂ ಮಾಡುವುದಿಲ್ಲವೆಂದು ಹೇಳಿ ಕಳುಹಿಸುತ್ತಾರೆ. ಇವತ್ತಿನವರೆಗೂ ಅವುಗಳೂ ಸಹ ಯಾವ ಸಮಸ್ಯೆಯನ್ನೂ ಮಾಡದೆ ಕೊಟ್ಟಿದ್ದನ್ನು ತಿಂದು ಹೋಗುತ್ತವೆ. ಕಂಬಳದ ವಿಚಾರದಲ್ಲಿಯೂ ಸಹ ಇದು ಅನ್ವಯ. ಕೋಣಗಳನ್ನು ಪ್ರೀತಿಯಿಂದ ಚೆನ್ನಾಗಿ ಸಾಕಿದ್ದಾರೋ ಇಲ್ಲವೋ ಎನ್ನುವುದನ್ನು ಆ ಕೋಣಗಳನ್ನು ನೋಡಿದವರಿಗೆ ತಿಳಿಯುತ್ತದೆ.
ಕಂಬಳದ ವಿರುದ್ದ ಉದ್ದುದ್ದ ಭಾಷಣಗಳನ್ನು ಮಾಡುವ ಪ್ರಾಣಿ ದಯಾಪರರುಗಳು, ಕೋಳಿ ಫಾರಂನ ಎದುರಾಗಲೀ ಅಥವಾ ಮಾಂಸದ ಅಂಗಡಿಯ ಎದುರಾಗಲೀ ಅಥವಾ ದನಗಳನ್ನು ಹೊತ್ತೊಯ್ಯುವವರ ಮನೆಗಳ ಮುಂದೆ ಧರಣಿ ಕುಳಿತಿದ್ದಾಗಲೀ ಅಥವಾ ನಿಷೇಧಿಸಲೇಬೇಕೆಂದು ಪ್ರತಿಭಟನೆ ಮಾಡಿದ್ದಾಗಲೀ ಕಂಡಂತಿಲ್ಲ. ಪ್ರಾಣಿ ದಯಾಪರರ ಪ್ರಕಾರ ಕೋಳಿ ಮತ್ತು ಕುರಿಯ ಮಾಂಸಗಳು ತಿನ್ನುವ ಪದಾರ್ಥಗಳು. ನನಗೂ ಇದರಲ್ಲಿ ಯಾವುದೇ ತಕರಾರಿಲ್ಲ. ಪ್ರತಿದಿನವೂ ಅಭ್ಯಾಸ ಮಾಡಿ, ಕಂಬಳದ ದಿನ ಆಟದಲ್ಲಿ ಪ್ರೀತಿಯಿಂದ ಸಾಕಿದ ಯಜಮಾನನಿಗೆ ಸಹಕರಿಸಿ, ಮನೆಗೆ ಹೋಗುವ ಕೋಣಗಳ ಸ್ಥಿತಿಯು, ಸತ್ತು ಇನ್ನೊಬ್ಬರ ಹೊಟ್ಟೆಯನ್ನು ಸೇರುವ ಕುರಿ ಕೋಳಿ ಅಥವಾ ಗೋವುಗಳಿಗಿಂತಲೂ ಅಮಾನವೀಯವೇ? ಕಂಬಳವನ್ನು ನಿಷೇಧಿಸಲೇಬೇಕು ಎಂದು ತುದಿಗಾಲಿನಲ್ಲಿ ನಿಂತವರಿಗೆ, ಕಂಬಳವು ದನಗಳನ್ನು ಕಸಾಯಿ ಖಾನೆಗೆ ಅಟ್ಟುವುದಕ್ಕಿಂತಲೂ ಬರ್ಬರವಾದ ಕೆಲಸವಾಗಿ ಕಂಡದ್ದಾದರೂ ಹೇಗೆ?

By suddi9

Leave a Reply

Your email address will not be published. Required fields are marked *