ಬಂಟ್ವಾಳ: ತಾಲ್ಲೂಕಿನಲ್ಲಿ ಸುಮಾರು 900 ವರ್ಷಗಳ ಹಿನ್ನೆಲೆ ಹೊಂದಿರುವ ಪ್ರಸಿದ್ಧ ಮಂಚಿ-ಕೊಳ್ನಾಡು ಶ್ರೀ ಗೋಪಾಲಕೃಷ್ಣ ದೇವಸ್ಥಾನವು ಸುಮಾರು ರೂ 3.27ಕೋಟಿ ವೆಚ್ಚದಲ್ಲಿ ಸಂಪೂರ್ಣ ಪುನರ್ ನಿರ್ಮಾಣಗೊಳ್ಳಲಿದ್ದು, ಇದೇ 24ರಂದು ಬೆಳಿಗ್ಗೆ ಶ್ರೀದೇವರ ಬಾಲಾಲಯ ಪ್ರತಿಷ್ಠೆ ಜೊತೆಗೆ ಸುತ್ತುಪೌಳಿ ಮತ್ತು ಪರಿವಾರ ದೈವಗಳ ಗುಡಿ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಹೇಳಿದ್ದಾರೆ.ಈ ದೇವಸ್ಥಾನದಲ್ಲಿ ಶನಿವಾರ ನಡೆದ ಭಕ್ತರ ಸಮಾಲೋಚನಾ ಸಭೆ ಬಳಿಕ ಪ್ರತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಅಂದು ಬೆಳಿಗ್ಗೆ 8.30 ಗಂಟೆಗೆ ಮಂಕುಡೆ ರಾಮಣ್ಣ ಆಚಾರ್ ಮತ್ತು ಕೆಮ್ಮಿಂಜೆ ನಾಗೇಶ ತಂತ್ರಿ ಪೌರೋಹಿತ್ಯದಲ್ಲಿ ಶ್ರೀದೇವರ ಬಾಲಾಲಯ ಪ್ರತಿಷ್ಠೆ ಮತ್ತು ಹಾಗೂ ಮುಜರಾಯಿ ಖಾತೆ ಸಚಿವ ರುದ್ರಪ್ಪ ಮಾನಪ್ಪ ಲಮ್ಹಾಣಿ ಶಿಲಾನ್ಯಾಸ ನೆರವೇರಿಸುವರು.
ಅಂದು ಬೆಳಿಗ್ಗೆ 11ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲು ದೀಪ ಪ್ರಜ್ವಲನಗೊಳಿಸುವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆನಿರ್ದೇಶಕ ಚಂದ್ರಶೇಖರ ನೆಲ್ಯಾಡಿ, ಉದ್ಯಮಿ ಎಂ.ಮಹಾಬಲ ಕೊಟ್ಟಾರಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು. 19btl-Manchi
ಕಳೆದ 1975ರಲ್ಲಿ ಜೀರ್ಣೋದ್ದಾರಗೊಂಡಿದ್ದ ಈ ದೇವಸ್ಥಾನಕ್ಕೆ ಯಾವುದೇ ಮೂಲ ಆದಾಯ ಇಲ್ಲದಿದ್ದರೂ ನಿರಂತರವಾಗಿ ಭಜನೆ, ಪರಿಸರ ದಿನಾಚರಣೆ, ವೈದ್ಯಕೀಯ ತಪಾಸಣೆ, ಭಾಗವತ ಸಪ್ತಾಹ, ದುರ್ಗಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಗುತ್ತಿದೆ. ಈಗಾಗಲೇ ನಾಗಸಾನಿಧ್ಯ ಮತ್ತು ಅಶ್ವತ್ಥಕಟ್ಟೆ ಪುನರ್ ನಿರ್ಮಾಣಗೊಂಡಿದ್ದು, ನೂತನ ಸುತ್ತುಪೌಳಿಯಲ್ಲಿ ಮಹಾಗಣಪತಿ, ಶಾಸ್ತಾವು ಮತ್ತು ದುರ್ಗೆ ಗುಡಿ ಪುನರ್ ನಿರ್ಮಾಣಗೊಳ್ಳಲಿದೆ. ಇಲ್ಲಿನ ಗರ್ಭಗುಡಿ ಮತ್ತು ತೀರ್ಥಮಂಟಪ ಶಿಲಾಮಯಗೊಳಿಸಿ ಮಾಡಿಗೆ ತಾಮ್ರ ಅಳವಡಿಸಲಾಗುವುದು. ಪರಿವಾರ ದೈವ ಕೊಡಮಣಿತ್ತಾಯಿ, ರಕ್ತೇಶ್ವರಿ, ಗುಳಿಗ ಮತ್ತು ಕೊರತಿ ದೈವಗಳಿಗೆ ಹೊರಾಂಗಣದಲ್ಲಿ ಪ್ರತ್ಯೇಕ ಗುಡಿ ನಿರ್ಮಿಸಲಾಗುತ್ತದೆ. ದೇವಳದ ಜಮೀನಿನಲ್ಲಿ ಇರುವ ಪುರಾತನ ಕೆರೆ ಅಭಿವೃದ್ಧಿ ಸಹಿತ ಹಾಕಿಕೊಳ್ಳಲಾಗಿದ್ದು, ಪ್ರತ್ಯೇಕ ಸಭಾಂಗಣ, ಕುಡಿಯುವ ನೀರಿನ ಯೋಜನೆ, ಶೌಚಾಲಯ ನಿರ್ಮಾಣ ಮತ್ತಿತರ ಕಾಮಗಾರಿ ನಡೆಸಲು ಸಮಿತಿ ನಿರ್ಧರಿಸಿದೆ. ಇಲ್ಲಿನ ಮಂಚಿ, ಇರಾ, ಕೊಳ್ನಾಡು, ಸಾಲೆತ್ತೂರು, ಬೋಳಂತೂರು ಈ ಐದು ಗ್ರಾಮಗಳಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಸಹಿತ ಅಪಾರ ಮಂದಿ ಭಕ್ತರು ಈಗಾಗಲೇ ದೇವಸ್ಥಾನದಲ್ಲಿ ಶ್ರಮದಾನ ನಡೆಸುತ್ತಿದ್ದಾರೆ.
ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಮತ್ತು ಧರ್ಮಸ್ಥಳ ಧಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಇವರಿಂದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರೆತಿದ್ದು, ಸೌಹಾರ್ದತೆಯ ತಾಣವಾಗಿರುವ ಈ ಪರಿಸರದಲ್ಲಿ ಯಾವುದೇ ಜಾತಿ, ಧರ್ಮ ಮತ್ತು ರಾಜಕೀಯ ಭೇದವಿಲ್ಲದೆ ದೇವಳದ ಜೀರ್ಣೋದ್ಧಾರ ಕಾರ್ಯದಲ್ಲಿ ಭಕ್ತರು ಸ್ವತಃ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಪದಾಧಿಕಾರಿಗಳಾದ ಜಯರಾಮ ಶೇಖ, ಸೂರ್ಯನಾರಾಯಣ ಭಟ್, ರಾಮಕೃಷ್ಣ ಭಟ್, ಎನ್.ಜಗದೀಶ ಶೆಟ್ಟಿ, ಸೀತಾರಾಮ ಶೆಟ್ಟಿ ಸಿ.ಎಚ್., ಪ್ರಮುಖರಾದ ಲಕ್ಷ್ಮಣ, ಕೊರಗಪ್ಪ, ವಿಶ್ವನಾಥ ಬಂಗೇರ, ಸೀತಾರಾಮ ಬಂಗೇರ, ರಾಮ ಮೂಲ್ಯ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *