ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇದರ ದಕ್ಷಿಣ ಕನ್ನಡ ಜಿಲ್ಲಾ ವ್ಯವಸ್ಥಾಪಕ ರಾಮಮೂರ್ತಿ ಮಯ್ಯ ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ
ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಇತ್ತೀಚೆಗೆ ಬಿ.ಸಿರೋಡ್‍ನ ಸವಿತಾ ಸೌಹಾರ್ಧ ಸಹಕಾರಿ ನಿಯಮಿತ ಇದರ ಮಾಸಿಕ ಸಭೆಯಲ್ಲಿ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು.
ಈ ಸಂದರ್ಭ ಸಮಾಜದ ಅಧ್ಯಕ್ಷ ಆನಂದ ಭಂಡಾರಿ, ಮಾಜಿ ಅಧ್ಯಕ್ಷ ದಿನೇಶ್ ಎಲ್. ಬಂಗೇರ, ಸವಿತಾ ಸೌಹಾರ್ಧ ಸಹಕಾರಿ ನಿಯಮಿತ ಅಧ್ಯಕ್ಷ ವಿಶ್ವನಾಥ ಬಂಟ್ವಾಳ್, ಉಪಾಧ್ಯಕ್ಷ ಸುರೇಶ್ ನಂದೊಟ್ಟು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಜವಾಬ್ದಾರಿ ವಹಿಸಿಕೊಂಡಂದಿನಿಂದ ಸರಕಾರ ನೀಡುವ ಸೌಲಭ್ಯಗಳನ್ನು ತಕ್ಷಣ ಸಂಬಂಧಪಟ್ಟ ಸಮಾಜದ ಮುಖ್ಯಸ್ಥರಿಗೆ ತಿಳಿಸಿ ಸಭೆ ಕರೆದು ಯೋಜನೆಗಳು ಯಶಸ್ವಿಯಾಗುವರೇ ಹಗಲಿರುಳು ಶ್ರಮಿಸಿದ್ದಾರೆ ಎಂದು ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಅವರು ನೆನಪು ಮಾಡಿಕೊಂಡರು.
ಅವರ ನಿಧನದಿಂದಾಗಿ ಸವಿತಾ ಸಮಾಜದಂತಹ ಹಿಂದುಳಿದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಸರಕಾರದಿಂದ ಹಿಂದುಳಿದ ವರ್ಗಗಳಿಗೆ ಸಿಗುವ ಸೌಲಭ್ಯಗಳನ್ನು ಅತೀ ಶೀಘ್ರದಲ್ಲಿ ಫಲಾನುಭವಿಗಳಿಗೆ ದೊರಕಿಸಿಕೊಡುವಲ್ಲಿ ನಿಷ್ಣಾತರು. ಹಾಗೆಯೇ ನೀಡಿದ ಸಾಲ ಸೌಲಭ್ಯಗಳನ್ನು ಫಲಾನುಭವಿಗಳ ಮನವೊಲಿಸಿ ಮರುಪಾವತಿ ಮಾಡಿಸುವರೇ ಯಶಸ್ಸನ್ನು ಗಳಿಸಿದ್ದರು ಎಂದು ರಾಜ್ಯ ಪ್ರತಿನಿಧಿ ವಸಂತ ಹೇಳಿದರು.
