ಬಂಟ್ವಾಳ : ಕೋಮು ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಬಂಟ್ವಾಳ ತಾಲೂಕಿನ ಕಲ್ಲಡ್ಕ ಮತ್ತು ಪರಂಗೀಪೇಟೆಯಲ್ಲಿ ನೂತನವಾಗಿ ಪಕ್ಕಾ ಪೊಲೀಸ್ ಠಾಣೆಯನ್ನು ತೆರೆಯಲು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಪ್ರಸ್ತಾವನೆಯನ್ನು ಸಿದ್ದಪಡಿಸಿ ಸರಕಾರಕ್ಕೂ ಸಲ್ಲಿಸಿದೆ ಎಂದು ತಿಳಿದು ಬಂದಿದೆ. ಈ ಎರಡು ಸ್ಥಳಗಳಲ್ಲಿ ಪೊಲೀಸ್ ಠಾಣೆ ತೆರೆಯಲು ಗ್ರೀನ್ ಸಿಗ್ನಲ್ ನೀಡಿದರೆ ಅತೀ ಹೆಚ್ಚು ಪೊಲೀಸ್ ಠಾಣೆ ಹೊಂದುವ ತಾಲೂಕಾಗಿ ಗುರುತಿಸಲಿದೆ.ಸದ್ಯ ಕೋಮು ಸೂಕ್ಷ್ಮ ಪ್ರದೇಶವೆಂದೆ ಪೊಲೀಸರ ಭೂಪಟದಲ್ಲಿ ಗುರುತಿಸಲ್ಲಟ್ಟ ತಾಲೂಕಿನ ಕಲ್ಲಡ್ಕ ಮತ್ತು ಫರಂಗೀಪೇಟೆಯಲ್ಲಿ ಪೊಲೀಸ್ ಹೊರಠಾಣೆಗಳು ಕಾರ್ಯಾಚರಿಸುತ್ತಿದೆ ಇದನ್ನೇ ಪಕ್ಕಾ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ.ಕಲ್ಲಡ್ಕದಲ್ಲಿ ಕೆ.ಸಿ.ರೋಡಿನಲ್ಲಿ ಹೊರಠಾಣೆಯಿದ್ದು,ಇದನ್ನು ಕಲ್ಲಡ್ಕದ ಮೇಲಿನಪೇಟೆಗೆ ಸ್ಥಳಾಂತರಿಸಿ ಇದಕ್ಕೆ ವಿಟ್ಲ ಠಾಣೆಗೊಳಪಟ್ಟ ಒಂದಷ್ಟು ಗ್ರಾಮವನ್ನು ಸೇರಿಸಿ ಪಕ್ಕಾ ಠಾಣೆಯನ್ನಾಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕಲ್ಲಡ್ಕ ಮೇಲಿನ ಪೇಟೆಯಲ್ಲೆ ಹೆಚ್ಚಿನ ಅನಾಹುತ,ಕೆಲ ಘಟನೆಗಳು ಕೂಡ ನಡೆಯುತ್ತಿದೆ ಹೀಗಾಗಿ ಮೇಲಿನಪೇಟೆಯಲ್ಲಿ ಹೊರಠಾಣೆ ಸ್ಥಳಾಂತರಕ್ಕೆ ಸ್ಥಳೀಯರ ಆಗ್ರಹವು ಅಗಿತ್ತು.ಇದೀಗ ಜಿಲ್ಲಾ ಪೊಲೀಸ್ ಇಲಾಖೆ ಇದಕ್ಕೆ ಸ್ಪಂದಿಸಿದ್ದು, ಕಲ್ಲಡ್ಕ ಮೇಲಿನಪೇಟೆಯಲ್ಲಿ ಪೊಲೀಸ್ ಠಾಣೆ ತೆರೆಯಲು ಮುಂದಾಗಿದೆ.ತಾಲೂಕಿನಲ್ಲಿ ಪ್ರಸ್ತುತ ಬಂಟ್ವಾಳದಲ್ಕಿ ಎಎಸ್ಪಿ ಗ್ರೇಡ್ ನ ಉಪವಿಭಾಗ ಕಚೇರಿ,ಸರ್ಕಲ್ ಇನ್ಸ್ಪೆಕ್ಟರ್,ನಗರ,ಗ್ರಾಮಾಂತರ,ವಿಟ್ಲಠಾಣೆಗಳಿವೆ,ಕಲ್ಲಡ್ಕ,ಫರಂಗಿಪೇಟೆ,ಸಿದ್ದಕಟ್ಟೆಯಲ್ಲಿ ಪೊಲೀಸ್ ಓ.ಪಿ.ಗಳಿವೆ.ಹಾಗೆಯೇ ತಾಲೂಕಿನ ಒಂದಷ್ಟು ಗ್ರಾಮಗಳುಪುಂಜಾಲಕಟ್ಟೆ,ವೇಣೂರು,ಉಪ್ಪಿನಂಗಡಿ,ಪುತ್ತೂರು ಪೊಲೀಸ್ ಠಾಣೆಗೆ ಹಂಚಿಕೆಯಾಗಿದೆ.ಹೀಗಾಗಿ ಕೆಲ ಪ್ರಕರಣಗಳಾದಾಗ ಪೊಲೀಸ್ ಠಾಣೆಯ ಮಧ್ಯೆ ಗಡಿವಿವಾದದ ಪ್ರಮೇಯಗಳು ಉಂಟಾದ ಉದಾಹರಣೆಯು ಇದೆ. ಕಳೆದ ಮೇ.೨೬ ರಂದು ನಡೆದ ಇಬ್ಬರ ವಯಕ್ತಿಕ ಜಗಳ ಕೋಮು ಬಣ್ಣಕ್ಕೆ ತಿರುಗಿ ಸುದೀರ್ಘ 60 ದಿನಗಳ ಕಾಲ ಸೆ.೧೪೪ ನಿಷೇದಾಜ್ಙೆ ಹೇರಲ್ಪಟ್ಟಿತ್ತು.ಬಳಿಕ ನಿರ್ಬಂಧಕಾಜ್ಙೆ ಜಾರಿಗೊಳಿಸಲಾಗಿತ್ತು, ಇದುಕೂಡ ತಾಲೂಕಿನ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಸದ್ಯ ಬಂಟ್ವಾಳದಾದ್ಯಂತ ಹೆಚ್ಚುವರಿ ಪೊಲೀಸರು ಬಂದೋಬಸ್ತಿನಲ್ಲಿದ್ದಾರೆ. ಇದೀಗ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹೊಸದಾಗಿಯೇ ಎರಡು ಪಕ್ಕಾ ಠಾಣೆ ತೆರೆಯಲು ಸರಕಾರದಿಂದ ಅನುಮತಿ ಕೋರಿದೆ.
