ಬಂಟ್ವಾಳ: ಆಟಿ ಆಚರಣೆಯ ಕಾರ್ಯಕ್ರಮಗಳು ಆಟಿಯ ನೈಜ ಅನುಭವ ಒದಗಿಸಿದಾಗ ಮಾತ್ರ ಆಟಿಯ ಮಹತ್ವ ಅರ್ಥವಾಗಲು ಸಾಧ್ಯ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಿ.ಎಂ.ಕುಲಾಲ್ ಹೇಳಿದರು.
ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಬುಧವಾರ ನಡೆದ ಆಟಿಡೊಂಜಿ ಕೂಟವನ್ನು “ಕಾಪುವಿಗೆ ಕಳ್ಳಿ ನೆಡುವ” ಮೂಲಕ ಉದ್ಘಾಟಿಸಿ, ಆಟಿ-ಆಚರಣೆ-ನಂಬಿಕೆ ಕುರಿತಾಗಿ ಉಪನ್ಯಾಸ ನೀಡಿದರು.
ಹಿಂದಿನ ಕಾಲದಿಂದಲೂ ಹಿರಿಯರು ಆಟಿ ತಿಂಗಳಿಗೆ ವಿಶೇಷ ಒತ್ತು ನೀಡುತ್ತಾ ಬಂದಿರುವುದಕ್ಕೆ ಹಲವು ಕಾರಣಗಳಿವೆ. ಈ ನಂಬಿಕೆಗಳು ಮೂಢನಂಬಿಕೆಗಳಲ್ಲ, ಇದರ ಹಿಂದೆ ವೈಜ್ಞಾನಿಕ ಸತ್ಯ ಅಡಗಿದೆ ಎಂಬುದು ಇತ್ತೀಚಿನ ದಿನಗಳಲ್ಲಿ ರುಜುವಾತಾಗುತ್ತಾ ಬಂದಿದೆ.
ನಮ್ಮ ಹಿರಿಯರು ಅಂತರ್ಜಾಲ ಇಲ್ಲದ ಕಾಲದಲ್ಲೂ ಅಂತರ್ಜ್ಞಾನದ ಮೂಲಕ ಸತ್ಯವನ್ನು ಗ್ರಹಿಸಿಕೊಂಡಿದ್ದಾರೆ, ಆಟಿಕಳೆಂಜವೂ ಕೂಡ ಆಪ್ತಸಮಾಲೋಚಕನಂತೆ ಜನರ ಕಷ್ಟಪರಿಹರಿಸುವ ಕಾರ್ಯ ನಡೆಸುತ್ತಿದೆ ಎಂದರು.

ಔಷಧೀಯ ಗುಣಗಳ ಆಹಾರ ಸೇವನೆ ಮಾಡಬೇಕು, ರೋಗ ನಿರೋಧಕ ಶಕ್ತಿ ಇರುವ ಆಹಾರ ವಸ್ತುಗಳು ನಮಗೆ ಪ್ರಕೃತಿ ದತ್ತವಾಗಿ ದೊರೆಯುತ್ತದೆ. ಇದನ್ನು ತಿಳಿದುಕೊಳ್ಳುವ ಕುತೂಹಲವನ್ನು ಎಲ್ಲಾ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಶಾಲಾಸಂಚಾಲಕ ಪ್ರಹ್ಲಾದ್ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಮಕ್ಕಳು ಸಸ್ಯಪ್ರಬೇಧಗಳ ಬಗ್ಗೆ ಹೆಚ್ಚುಅರಿವು ಬೆಳೆಸಿಕೊಳ್ಳಬೇಕು. ಮರೆಯಾಗುತ್ತಿರುವ ಕೃಷಿಪದ್ಧತಿ, ಔಷಧೀಯ ಗುಣವುಳ್ಳ ಸಸ್ಯಗಳ ಕುರಿತಾಗಿ ಹಿರಿಯರಿಂದ ತಿಳಿದುಕೊಳ್ಳಿ ಎಂದರು. ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯರು ಬಾಳಿ ಬದುಕಿದ ರೀತಿ, ಪದ್ದತಿ ನಮ್ಮ ಬದುಕಿಗೆ ಆಧಾರ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಆದರೆ ಭೂತಕಾಲವನ್ನು ಮರೆತು ವರ್ತಮಾನದಲ್ಲಿ ಬದುಕುತ್ತಿರುವ ನಮ್ಮಲ್ಲಿ ಈಗ ಮನುಷ್ಯತ್ವ ಕಡಿಮೆಯಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ನಮ್ಮ ನಡೆನುಡಿಯಲ್ಲಿ ಮೃದುತ್ವದ ಸಂಕೇತವಾಗಿರುವ ತುಳುತನವನ್ನು ಮೆರೆಯುವಂತೆ ಮನವಿಮಾಡಿದರು.
ಆಡಳಿತ ಮಂಡಳಿ ಕಾರ್ಯದರ್ಶಿ ನಾರಾಯಣ ಶೆಟ್ಟಿ ಕೊಂಬಿಲ,
ಪುಷ್ಪಲತಾ ಎಸ್ ನಾಯ್ಕ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಆಳ್ವ, ಉಪಾಧ್ಯಕ್ಷೆ ಲಕ್ಷ್ಮೀ ಟೀಚರ್, ಪ್ರೌಢಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ವಿ.ಶೆಟ್ಟಿ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಗ್ರೇಸ್ ಪಿ ಸಲ್ಡಾನ ವೇದಿಕೆಯಲ್ಲಿದ್ದರು.
ಶಿಕ್ಷಕಿ ಲೀಲಾ ಸ್ವಾಗತಿಸಿ, ಶುಭಾ.ಕೆ ವಂದಿಸಿದರು, ಸುಧಾ ರಾವ್ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯ ಮುಂಭಾಗದಲ್ಲಿ ವಿವಿಧ ಔಷಧೀಯ ಸಸ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ವಿದ್ಯಾರ್ಥಿನಿ ಗ್ರೀಷ್ಮಾ ಆಳ್ವ ಔಷಧೀಯ ಸಸ್ಯಗಳ ಕುರಿತು ಮಾಹಿತಿ ನೀಡಿದರು. ಸಭಾಕಾರ್ಯಕ್ರಮದ ಬಳಿಕ ಶಾಲಾಮಕ್ಕಳಿಂದ ಆಟಿ, ತುಳುನಾಡು, ಕೃಷಿಪದ್ದತಿಯನ್ನು ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
