ಬಂಟ್ವಾಳ: ಮಾನವ ಬಾಳಿ ಬದುಕಲು ಆಮ್ಲಜನಕದ ಅಗತ್ಯವಿದ್ದು ನಮ್ಮ ಸುತ್ತಮುತ್ತ ಹಸಿರು ಸಸ್ಯಗಳನ್ನು ಬೆಳೆಸುವ ಮೂಲಕ ಶುದ್ಧಗಾಳಿ, ಸುಂದರ ಪರಿಸರವನ್ನು ನಿರ್ಮಾಣಮಾಡಬಹುದು ಎಂದು ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ.ಸುರೇಶ್ ಅಭಿಪ್ರಾಯಪಟ್ಟರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಅರಣ್ಯ ಇಲಾಖೆ ಬಂಟ್ವಾಳ ವಲಯ, ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜು ಮತ್ತು ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ನಡೆದ ‘ಕೋಟಿ ವೃಕ್ಷ ಆಂದೋಲನ ಸಸಿ ವಿತರಣೆ ಮತ್ತು ಜಾಗೃತಿ ಅಭಿಯಾನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಸಂಸ್ಥೆಯೂ ಕೂಡ ಪರಿಸರ ರಕ್ಷಣೆಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ, ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ಅಭಿಯಾನ ಅರಣ್ಯ ಇಲಾಖೆಯಿಂದ ಆರಂಭಗೊಂಡಿದೆ ಎಂದರು.
ನಿಸರ್ಗದಲ್ಲಿ ಬೆಳದಿರುವ ಅರಣ್ಯಗಳನ್ನು ಪೋಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಜೀವಿತಾವಧಿಯಲ್ಲಿ ಪ್ರಕೃತಿಯ ಮೂಲಧಾತುಗಳನ್ನೇ ಆಶ್ರಯಿಸಿ ಬದುಕುವ ಮನುಷ್ಯ ಪರಿಸರಕ್ಕೆ ಪೂರಕವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬ ಪ್ರಜೆಯೂ ಒಂದೊಂದು ಗಿಡವನ್ನು ನೆಡುವ ಸಂಕಲ್ಪ ಮಾಡಬೇಕು. ವೃಕ್ಷಗಳನ್ನು ಬೆಳೆಸುವುದೇ ಮಾನವನು ಜೀವಿತಾವಧಿಯಲ್ಲಿ ಮಾಡುವ ಅತ್ಯಂತ ದೊಡ್ಡ ಪುಣ್ಯದ ಕೆಲಸ . ವೃಕ್ಷಗಳು ಬೆಳೆದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಯು ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗಬಹುದು. ಪ್ರಕೃತಿಯ ನಿಯಮಗಳನ್ನು ದಿಕ್ಕರಿಸಿ ನಡೆದರೆ ಜೀವ ಜಂತುಗಳಿಗೆ ಉಳಿಗಾಲವಿಲ್ಲ. ಅರಣ್ಯನಾಶ ಮುಂದುವರೆದರೆ ಮುಂದೊಂದು ದಿನ ಆಮ್ಲಜನಕವನ್ನು ಮಾರುಕಟ್ಟೆಯಲ್ಲಿ ಖರೀದಿಸಬೇಕಾದ ದುಸ್ಥಿತಿ ಎದುರಾಗಬಹುದು ಎಂದರು.

ವಿದ್ಯಾವಂತನಾದ ಮಾನವ ತನ್ನ ಸೌಕರ್ಯಗಳನ್ನು ಪೂರೈಸಿಕೊಳ್ಳುವ ನೆಪದಲ್ಲಿ ಅರಣ್ಯ ಸಂಪತ್ತಿನ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾನೆ ಎಂದ ಅವರು, ಪರಿಸರಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ಯುವ ಜನರು ತೊಡಗುವ ಅಗತ್ಯತೆ ಇದೆ. ಸ್ವಚ್ಛವಾದ ಮತ್ತು ಸ್ವಸ್ಥ ದೇಶವನ್ನು ನಿರ್ಮಾಣಮಾಡುವುದಕ್ಕೆ ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು ಎಂದರು.ಎಸ್.ವಿ.ಎಸ್ ಪದವಿ ಕಾಲೇಜು ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ಮಾತನಾಡಿ, ತರಗತಿಯ ಪಠ್ಯದ ಜೊತೆಯಲ್ಲಿ ವಿದ್ಯಾಥಿಗಳಿಗೆ ಪರಿಸರ, ನೆಲ, ಜಲ ಸಂಪತ್ತಿನ ಅರಿವು ಮೂಡಿಸುವ ಕೆಲಸಗಳು ಅಗತ್ಯವಾಗಿ ನಡೆಯಬೇಕಾಗಿದೆ ಎಂದರು.
ಎಸ್.ವಿ.ಎಸ್ ಕಾಲೇಜುಗಳ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಾಲಕೃಷ್ಣ ಗೌಡ, ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷ ರೋನಾಲ್ಡ್ ಡಿಸೋಜ, ಎನ್ನೆಸ್ಸೆಸ್ ಘಟಕ ನಾಯಕರಾದ ಭರತ್ ಹಾಗೂ ಕು.ಅನುಜ್ಞಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಚೇತನ್ ಮುಂಡಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ವಂಧಿಸಿದರು. ಎನ್ನೆಸ್ಸೆಸ್ ಸ್ವಯಂ ಸೇವಕಿಯರಾದ ದಿವ್ಯಶ್ರೀ ಆಚಾರ್ಯ ಕೆ., ನಿರೀಕ್ಷಾ, ಶೈಲಾಕ್ಷಿ, ದೇವಿಕಾ ರಾಷ್ಟ್ರೀಯ ಸೇವಾ ಯೋಜನೆಯ ಆಶಯಗೀತೆ ಪ್ರಸ್ತುತ ಪಡಿಸಿದರು. ಉಪನ್ಯಾಸಕ ಶಿವಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ಎನ್ನೆಸ್ಸೆಸ್ ವಿದ್ಯಾರ್ಥಿಗಳಿಗೆ ವಲಯ ಅರಣ್ಯಾಧಿಕಾರಿ ಸಸಿಗಳನ್ನು ವಿತರಿಸಿದರು. ಉಪ ಅರಣ್ಯಾಧಿಕಾರಿ ಅನಿಲ್, ಬಂಟ್ವಾಳ ವಲಯ ಅರಣ್ಯ ರಕ್ಷಕಿ ಸ್ಮಿತಾ, ಸಹಯೋಜನಾಧಿಕಾರಿಗಳಾದ ನಮಿತಾ ಬಿ.ಎಲ್., ದಿವ್ಯಲಕ್ಷ್ಮೀ, ದೀಪಿಕಾ ಪ್ರಿಯಾ ಮತ್ತು ಪ್ರವೀಣ್ ಹಾಜರಿದ್ದರು.
