ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯ ಕಾಮುಕ ಭದ್ರತಾ ಸಿಬ್ಬಂದಿಯೋರ್ವ ಅಟ್ಟಹಾಸ ಮೆರೆದಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ರೋಗಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಗನಿಗೆ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಗೋಳ್ತಮಜಲಿನ ಸೀತಾರಾಮ ಶೆಟ್ಟಿ (35)ಎಂಬಾತ ಈ ಕೃತ್ಯವೆಸಗಿರುವ ಆರೋಪಿ.
ಬಾಲಕ ಚಿಕಿತ್ಸೆಗೆ ದಾಖಲಾಗಿದ್ದ ತನ್ನ ತಾಯಿಯ ಯೋಗಕ್ಷೇಮ ನೋಡಿಕೊಳ್ಳಲು ಆಸ್ಪತ್ರೆಗೆ ಬಂದಿದ್ದ ವೇಳೆ ಸೆಕ್ಯೂರಿಟಿ ಗಾರ್ಡ್ ಈ ಕೃತ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.ಮಹಿಳೆಯರ ವಾರ್ಡ್ನಲ್ಲಿ ರಾತ್ರಿ ವಾಸ್ತವ್ಯಕ್ಕೆ ಅವಕಾಶ ಇಲ್ಲದ ಕಾರಣ, ಬಾಲಕ ಆಸ್ಪತ್ರೆಯ ಕಾರಿಡಾರ್ನಲ್ಲಿ ಮಲಗಿದ್ದ. ಇದನ್ನು ಗಮನಿಸಿದ್ದ ಸೆಕ್ಯೂರಿಟಿ ಗಾರ್ಡ್ ಸೀತಾರಾಮ ಶೆಟ್ಟಿ, ತನ್ನ ರೂಮಿನಲ್ಲಿ ಮಲಗಲು ಅವಕಾಶ ಕಲ್ಪಿಸಿದ್ದ. ಆದರೆ, ರಾತ್ರಿ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎನ್ನಲಾಗಿದೆ. ಮರುದಿನ ಅನಾರೋಗ್ಯಕ್ಕೆ ಒಳಗಾದ ವೇಳೆ ಬಾಲಕ ಅಳುಕಿನಿಂದಲೇ ಭದ್ರತಾ ಸಿಬ್ಬಂದಿಯ ದೌರ್ಜನ್ಯವನ್ನು ತನ್ನ ಮನೆಯವರಿಗೆ ತಿಳಿಸಿದ್ದ.ಈ ಸಂಬಂಧ ಕುಟುಂಬಸ್ಥರು ಕದ್ರಿ ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರ ಈ ಘಟನೆ ನಡೆದಿದ್ದು, ಆರೋಪಿ ಸೀತಾರಾಮ್ ಶೆಟ್ಟಿಯನ್ನು ಮರುದಿನ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
