ಬಂಟ್ವಾಳ: ಬಿ.ಸಿ.ರೋಡ್ ನ ಲಾಂಡ್ರಿಗೆ ನುಗ್ಗಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಅವರ ಮೇಲೆ ತಲವಾರು ದಾಳಿನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಸೇರಿದಂತೆ ಆರು ತಂಡಗಳನ್ನು ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಬಂಟ್ವಾಳ ನಗರ ಠಾಣೆಯಲ್ಲಿ ಮೊಕ್ಕಾಂ ಹೂಡಿರುವ ಎಸ್ಪಿ ಯವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 20 ಮಂದಿಯನ್ನು ವಿಚಾರಣೆ ಮಾಡಿದ್ದು, ತನಿಖೆ ಪ್ರಗತಿಯಲ್ಲಿದೆ. ಆದರೆ ಆರೋಪಿಗಳ ಬಗ್ಗೆ ಯಾವುದೇ ಸ್ಪಷ್ಟ ಸುಳಿವು ಲಭ್ಯವಾಗಿಲ್ಲ. ಇದಕ್ಕಾಗಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮೂರು ತಂಡಗಳು ಕಾರ್ಯಾಚರಿಸಿದರೆ, ಜಿಲ್ಲೆಯ ಇತರ ವ್ಯಾಪ್ತಿಯಲ್ಲಿ ಮೂರು ತಂಡಗಳು ಕಾರ್ಯಾಚರಿಸುತ್ತಿದೆ ಎಂದು ಎಸ್ಪಿ ತಿಳಿಸಿದರು.
ಶರತ್ ಅವರ ಸ್ಥಿತಿ ಚಿಂತಾಜನಕವಾಗಿಯೇ ಇದೆ, ವೈದ್ಯರು ವಿಶೇಷ ನಿಗಾ ಇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದ ಅವರು ಶುಕ್ರವಾರ ಬಿ.ಸಿ.ರೋಡಿನಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಕರೆ ನೀಡಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಪೊಲೀಸ್ ಬಂದೋಬಸ್ತ್ ಬಲಪಡಿಸಲಾಗಿದೆ ಎಂದರು.
ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಮೈಸೂರು ಹಾಗೂ ಮಡಿಕೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದೋ ಬಸ್ತ್ ಗಾಗಿ 1000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ . ಇವರ ಮೇಲುಸ್ತುವಾರಿಗೆ 100 ಮಂದಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. 10 ಡಿಆರ್, 12 ಕೆ.ಎಸ್.ಆರ್.ಪಿ ತುಕಡಿಗಳು ಸೇರಿದಂತೆ ಕ್ಷಿಪ್ರ ಕಾರ್ಯಾಚರಣೆ ಪಡೆಯ 100 ಮಂದಿ ಸಿಬ್ಬಂದಿಗಳನ್ನು ಆಯಕಟ್ಟಿನ ಜಾಗದಲ್ಲಿ ನಿಯುಕ್ತಿಗೊಳಿಸಲಾಗಿದೆ ಎಂದು ಎಸ್ಪಿ ರೆಡ್ಡಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಮಂಗಳವಾರ ರಾತ್ರಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಮೇಲೆ ದಾಳಿ ನಡೆದ ಬಳಿಕ ಬಂಟ್ವಾಳ ತಾಲೂಕಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಗುರುವಾರವಂತೂ ಸಂಜೆ ಬಳಿಕ ಅಂಗಡಿ ಮುಂಗಟ್ಟುಗಳಲ್ಲಿ ವ್ಯವಹಾರ ಕಡಿಮೆ ಇದ್ದ ಕಾರಣ ಬಾಗಿಲು ಹಾಕುತ್ತಿದ್ದ ದೃಶ್ಯ ಕಂಡುಬಂತು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪೊಲೀಸರು ಅವಲೋಕಿಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗೂಡಂಗಡಿಗಳ ಸಹಿತ ಅಂಗಡಿ ಮುಂಗಟ್ಟುಗಳ ಎದುರು ಬಾಟಲಿ, ಟಯರ್ ಗಳನ್ನು ಹೊರಗೆ ಇಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ದುಷ್ಕøತ್ಯ ಎಸಗಲು ಪ್ರೇರೇಪಣೆ ನೀಡುವ ಇಂಥ ವಸ್ತುಗಳು ಕಂಡುಬರದಂತೆ ಎಚ್ಚರಿಕೆ ವಹಿಸಲು ಅವರು ಸೂಚನೆ ನೀಡಿದ್ದಾರೆ.
ತಾಲೂಕಿನಾದ್ಯಂತ ಪರಿಸ್ಥಿತಿ ಶಾಂತವಾಗಿದೆ, ಆದರೆ ಬಂದೋಬಸ್ತ್ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಪೊಲೀಸರೇ ಕಾಣಿಸಿಕೊಳ್ಳುತ್ತಿದ್ದಾರೆ. ಅಂಗಡಿಮುಂಗಟ್ಟುಗಳು ಎಂದಿನಂತೆ ಕಾರ್ಯಾಚರಿಸಿದ್ದು, ವಾಹನಗಳು ಕೂಡ ಮಾಮೂಲಿನಂತೆ ಸಂಚರಿಸುತ್ತಿವೆ.ಗುರುವಾರ ಪರಿಸ್ಥಿತಿಯನ್ನು ಅವಲೋಕಿಸಲು ಬಂಟ್ವಾಳ ನಗರ ಠಾಣೆಯಲ್ಲಿ ಎಸ್ಪಿ ಸಭೆ ನಡೆಸಿದರು. ಈ ಸಂದರ್ಭ ಪ್ರಭಾರಅಡಿಷನಲ್ ಎಸ್ಪಿ ವಿಷ್ಣವರ್ಧನ್, ಡಿವೈಎಸ್ಪಿ ರವೀಶ್ ಉಪಸ್ಥಿತರಿದ್ದರು.
ಸಿಸಿ ಟಿವಿಯಲ್ಲಿ ಅಸ್ಪಷ್ಟ ದೃಶ್ಯ..
ಶರತ್ ಮೇಲೆ ನಡೆದ ಹಲ್ಲೆ ನಡೆದ ಅಂಗಡಿ ಮುಂಭಾಗದ ದೃಶ್ಯಗಳು ಸ್ಥಳೀಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಬೈಕ್ ನಲ್ಲಿ ಆರೋಪಿಗಳು ಬಂದು ತೆರಳಿರುವುದು ಗೊತ್ತಾಗಿದೆ. ಆದರೆ ದೃಶ್ಯಗಳು ಅಸ್ಪಷ್ಟವಾಗಿದ್ದು, ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್ಪಿ ತಿಳಿಸಿದರು.
