ಬಂಟ್ವಾಳ,: ದಕ್ಷಿಣ ಕನ್ನಡ ಜಿಲ್ಲೆಯ ಅತೀ ಕೋಮು ಸೂಕ್ಷ್ಮ ಪ್ರದೇಶ ಎಂಬ ಕುಖ್ಯಾತಿಗೆ ಒಳಗಾಗಿರುವ ಬಂಟ್ವಾಳ ತಾಲೂಕಿನಾದ್ಯಂತ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸೋಮವಾರಕ್ಕೆ ಒಂದು ತಿಂಗಳು ಸಂದಿದೆ. ಯುವಕರಿಬ್ಬರಿಗೆ ಚೂರಿ ಇರಿದ ಘಟನೆಯ ಬಳಿಕ ಕಲ್ಲಡ್ಕ ಪರಿಸರದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದರಿಂದ ಮೇ 27ರಂದು ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಬಂಟ್ವಾಳ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ನಿಷೇಧಾಜ್ಞೆಯ ನಡುವೆಯೂ ಕೊಲೆ, ಕೊಲೆಯತ್ನ, ಚೂರಿ ಇರಿತ ಹಾಗೂ ಹಲ್ಲೆ ಪ್ರಕರಣಗಳು ಮರುಕಳಿಸಿದ್ದರಿಂದ ನಿಷೇಧಾಜ್ಞೆಯನ್ನು ಒಂದೊಂದೇ ವಾರ ವಿಸ್ತರಿಸುತ್ತಾ ಬರಲಾಗಿದೆ. ಇನ್ನೂ ಎರಡು ವಾರಗಳ ಕಾಲ ನಿಷೇಧಾಜ್ಞೆ ಮುಂದುವರಿಯುವ ಸಾಧ್ಯತೆ ಇದೆ.
ನಿಷೇಧಾಜ್ಞೆ ವಿಸ್ತರಣೆಗೊಂಡ ಅವದಿ: ಮೇ 27ರಿಂದ ಜೂನ್ 2, ಜೂನ್ 3ರಿಂದ ಜೂನ್ 9, ಜೂನ್ 10ರಿಂದ ಜೂನ್ 16, ಜೂನ್ 17ರಿಂದ ಜೂನ್ 23, ಜೂನ್ 23ರಿಂದ ಜೂನ್ 29.
ಪೊಲೀಸ್ ಸರ್ಪಗಾವಲು: ನಿಷೇಧಾಜ್ಞೆಯ ನಡುವೆಯೂ ಅಹಿತಕ ಘಟನೆಗಳು ಮರುಕಳಿಸಿರುವುದರಿಂದ ಬಂಟ್ವಾಳ ತಾಲೂಕಿನ ಅತೀ ಕೋಮು ಸೂಕ್ಷ್ಮ ಪ್ರದೇಶವಾದ ಕಲ್ಲಡ್ಕ, ಬಿ.ಸಿ.ರೋಡ್, ಕೈಕಂಬ, ವಿಟ್ಲ ಕನ್ಯಾನದಲ್ಲಿ ನಾಲ್ಕು ದಿನಗಳಿಂದ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಉಳಿದಂತೆ ಮೆಲ್ಕಾರ್, ಮಾಣಿ, ಫರಂಗಿಪೇಟೆ, ಬಂಟ್ವಾಳ ಪೇಟೆ ಸಹಿತ ತಾಲೂಕಿನ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮುಹಮ್ಮದ್ ಅಶ್ರಫ್ ಕೊಲೆ ಪ್ರಕರಣದ ಬಳಿಕ ತಾಲೂಕಿನಲ್ಲಿ ಪರಿಸ್ಥಿತಿ ಇನ್ನಷ್ಟು ಹದೆಗಟ್ಟಿದ್ದರಿಂದ ಹೆಚ್ಚಿನ ಭದ್ರತೆಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‍ಆರ್‍ಪಿ) ಪಡೆ ಹಾಗೂ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಬಂಟ್ವಾಳಕ್ಕೆ ಕರೆಸಲಾಗಿದೆ. ಜಿಲ್ಲೆಯ ಭದ್ರತಾ ಉಸ್ತುವಾರಿಯನ್ನಾಗಿ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈರವರನ್ನು ನಿಯೋಜಿಸಲಾಗಿದೆ. ಪ್ರಸ್ತುತ ಅಣ್ಣಾಮಲೈ ಜಿಲ್ಲೆಯಲ್ಲೇ ಮೊಕ್ಕಂ ಹೂಡಿದ್ದು ಬಂಟ್ವಾಳ ಸಹಿತ ಜಿಲ್ಲೆಯ ಪ್ರತೀ ಪೊಲೀಸ್ ಠಾಣೆಗೆ ಭೇಟಿ ಭದ್ರತೆಯ ಅವಲೋಕನ ನಡೆಸುತ್ತಿದ್ದಾರೆ. IMG_20170614_113617910_HDR-650x366
ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಡಿವೈಎಸ್ಪಿ, ಸರ್ಕಲ್, ಎಸ್ಸೈಗಳನ್ನು ಕರೆಸಿ ಜಿಲ್ಲೆಯ ವಿವಿಧ ಪ್ರದೇಶದ ಭದ್ರತಾ ಉಸ್ತುವಾರಿಯನ್ನು ನೀಡಲಾಗಿದೆ. ಬಂಟ್ವಾಳ ತಾಲೂಕಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ರಚಿಸಲಾಗಿದ್ದು ವಾಹನಗಳ ತಪಾಸಣೆ ಕಾರ್ಯ ಮುಂದುವರಿದಿದೆ. ಅಲ್ಲದೆ ಇಡೀ ತಾಲೂಕಿನಲ್ಲಿ ರಾತ್ರಿ ವೇಳೆ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.
ಪೊಲೀಸ್ ಇಲಾಖೆಗೆ ಸರ್ಜರಿ: ಬಂಟ್ವಾಳ ತಾಲೂಕಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯನ್ನು ನಿಯಂತ್ರಿಸಲು ವಿಫಲವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ರಾಜ್ಯ ಸರಕಾರ ಮೇಜರ್ ಸರ್ಜರಿ ನಡೆಸಿದೆ. ಜಿಲ್ಲೆಯ ಕೆಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹೊಸಬರನ್ನು ನೇಮಕ ಮಾಡಿದ್ದರೆ ಇನ್ನು ಕೆಲವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ.
ಹೊರ ಠಾಣೆಗೆ ಆಗ್ರಹ: ಕಲ್ಲಡ್ಕದ ಮೇಲಿನ ಪೇಟೆಯಲ್ಲಿ ಚೂರಿ ಇರಿತ, ಕೋಮು ಘರ್ಷಣೆಗಳು ಮರುಕಳಿಸುತ್ತಿದೆ. ಆದರೆ ಕಲ್ಲಡ್ಕದಲ್ಲಿ ಪೊಲೀಸ್ ಹೊರಠಾಣೆ ಇರುವುದು ಮಾತ್ರ ಕಲ್ಲಡ್ಕ ಕೆಳಗಿನ ಪೇಟೆಯಲ್ಲಾಗಿದೆ. ನಾಮಕಾವಸ್ಥೆಯಲ್ಲಿರುವ ಕಲ್ಲಡ್ಕ ಪೊಲೀಸ್ ಹೊರ ಠಾಣೆಯನ್ನು ಕಲ್ಲಡ್ಕದ ಕೇಂದ್ರವಾದ ಮೇಲಿನ ಪೇಟೆಯ ಬಸ್ ನಿಲ್ದಾಣ ಮೇಲೆಗೆ ಸ್ಥಳಾಂತರಿಸಬೇಕು ಎಂದು ಇಲ್ಲಿನ ನಾಗರಿಕರ ಹಲವು ವರ್ಷಗಳ ಬೇಡಿಕೆಯಾಗಿದೆ. ಆದರೆ ಜಿಲ್ಲಾಡಳಿತವಾಗಲೀ, ಪೊಲೀಸ್ ಇಲಾಖೆಯಾಗಲೇ ನಾಗರಿಕರ ಮನವಿಗೆ ಯಾವುದೇ ಸ್ಪಂದನೆ ನೀಡಿಲ್ಲ.
ಕೋಮು ಘರ್ಷಣೆಯಿಂದ ತತ್ತರಿಸಿರುವ ಕಲ್ಲಡ್ಕದ ಜನತೆಗೆ ಮತ್ತೆ ಹೊರ ಠಾಣೆಯ ಸ್ಥಳಾಂತರದ ನೆನಪು ಆಗಿದೆ. ಇತ್ತೀಚೆಗೆ ನಡೆದ ಶಾಂತಿ ಸಭೆಯಲ್ಲೂ ಎರಡೂ ಧರ್ಮದ ಮುಖಂಡರು ಹೊರಠಾಣೆಯನ್ನು ಕಲ್ಲಡ್ಕ ಬಸ್ ನಿಲ್ದಾಣದ ಮೇಲಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ. ಹೊರಠಾಣೆ ಕಲ್ಲಡ್ಕದ ಕೇಂದ್ರಕ್ಕೆ ಬಂದರೆ ಕೋಮು ಘರ್ಷಣೆ ಕಡಿಮೆಯಾಗಲಿದೆ ಎಂದು ಇಲ್ಲಿನ ಶಾಂತಿ ಪ್ರೀಯ ನಾಗರಿಕರ ಆಗ್ರಹ. ಆದರೆ ಅವರ ಆಗ್ರಹಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಯಾಗಾವ ಸ್ಪಂದಿಸಲಿದೆ ಎಂಬುದು ಕಾದು ನೋಡಬೇಕಾಗಿದೆ.
ಹಾಗೆಯೇ ಗಡಿ ಪ್ರದೇಶವಾದ ಕನ್ಯಾನದಲ್ಲೂ ಪದೇ ಪದೇ ಕೋಮು ಘರ್ಷಣೆ, ಅಕ್ರಮ ಚಟುವಟಿಕೆ ಮರುಕಳಿಸುತ್ತಿರುವುದರಿಂದ ಇಲ್ಲಿ ಹೊಸ ಪೊಲೀಸ್ ಹೊರಠಾಣೆ ನಿರ್ಮಾಣ ಮಾಡಬೇಕು ಎಂಬ ಆಗ್ರಹ ಇಲ್ಲಿನ ನಾಗರಿಕರದ್ದು. ಈ ಬಗ್ಗೆ ಪೊಲೀಸ್ ಇಲಾಖೆ ರಾಜ್ಯ ಸರಕಾರಕ್ಕೆ ಪ್ರಸ್ತಾವಣೆ ಕಳುಹಿಸಿದೆ.

By suddi9

Leave a Reply

Your email address will not be published. Required fields are marked *