ಬಂಟ್ವಾಳ: ವಿಟ್ಲದ ಎಟಿಎಂವೊಂದರಲ್ಲಿ ಗ್ರಾಹಕರು ಹಣ ಡ್ರಾ ಮಾಡಿದಾಗ ಎರಡು ಸಾವಿರ ರೂಪಾಯಿ ಮುಖ ಬೆಲೆಯ ಹರಿದ ನೋಟುಗಳು ಬಂದಿರುವ ಘಟನೆ ಮಂಗಳವಾರ ನಡೆದಿದ್ದು ಗ್ರಾಹಕರನ್ನು ಕಂಗೆಡಿಸಿದೆ. ವಿಟ್ಲ ಬಸ್ ನಿಲ್ದಾಣದ ಬಳಿಯ ಅಪ್ಪಾಜಿ ರಾವ್ ಕಟ್ಟಡದಲ್ಲಿರುವ ಕರ್ನಾಟಕ ಬ್ಯಾಂಕ್‍ನ ಕಡಬ ಶಾಖೆಯ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ವಿಟ್ಲಕ್ಕೆ ಬಂದಿರುವ ಸಾಲೆತ್ತೂರಿನ ನಿವಾಸಿ ಮುಹಮ್ಮದ್ ಬಶೀರ್ ಎಟಿಎಂನಿಂದ ಹಣ ಡ್ರಾ ಮಾಡಿದ್ದಾರೆ. ಎಂಟು ಸಾವಿರ ರೂಪಾಯಿ ಡ್ರಾ ಮಾಡಿದ್ದು ಎರಡು ಸಾವಿರ ರೂಪಾಯಿ ಮುಖ ಬೆಲೆಯ ನಾಲ್ಕು ನೋಟುಗಳು ಬಂದಿದೆ. ಆ ಪೈಕಿ ಎರಡು ನೋಟುಗಳು ಸ್ಟಿಕ್ಕರ್ ಅಂಟಿಸಿರುವ ಹರಿದ ನೋಟುಗಳಾಗಿವೆ ಎಂದು ಬಶೀರ್ ಆರೋಪಿಸಿದ್ದಾರೆ.
ಹರಿದ ನೋಟುಗಳು ಬಂದ ಹಿನ್ನೆಲೆಯಲ್ಲಿ ಚಿಂತೆಗೀಡಾದ ಬಶೀರ್ ಎಟಿಎಂ ಎದುರೇ ಕೆಲವು ಹೊತ್ತು ನಿಂತಿದ್ದು ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಮೂರು ಗ್ರಾಹಕರು ಅದೇ ಎಟಿಎಂನಿಂದ ಹಣ ಡ್ರಾ ಮಾಡಿದಾಗ ಅವರಿಗೂ ಎರಡು ಸಾವಿರ ರೂಪಾಯಿ ಮುಖ ಬೆಲೆಯ ಹರಿದ ನೋಟುಗಲೇ ಸಿಕ್ಕಿದೆ ಎಂದು ಬಶೀರ್ ತಿಳಿಸಿದ್ದಾರೆ. ತದ ನಂತರ ಬಶೀರ್ ಎಟಿಎಂನ ಕಾವಲುಗಾರನಿಂದ ಕಡಬ ಶಾಖೆಯ ಮೆನೇಜರ್‍ರ ಮೊಬೈಲ್ ನಂಬ್ರ ಪಡೆದು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿಚಾರಿಸಿ ಹೇಳುತ್ತೇನೆ ಎಂದು ಫೋನ್ ಕಟ್ ಮಾಡಿದ್ದ ಮ್ಯಾನೇಜರ್ ಹಣ ಲೋಡ್ ಮಾಡುವ ವ್ಯಾನ್ ಸ್ಪಲ್ಪ ಹೊತ್ತಲ್ಲಿ ಅಲ್ಲಿಗೆ ಬರಲಿದ್ದು ಅವರೊಂದಿಗೆ ಹಣ ಬದಲಾವಣೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಸುಮಾರು ಒಂದು ಗಂಟೆಗೂ ಅಧಿಕ ಕಾದರೂ ವಾಹನ ಬಾರದ ಹಿನ್ನೆಲೆಯಲ್ಲಿ ಮತ್ತೆ ಫೋನ್ ಮಾಡಿದಾಗ ವ್ಯಾನ್ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದು ಅವರ ವಿರುದ್ಧ ತಾನು ಕ್ರಮ ಜರಗಿಸುತ್ತೇನೆ ಎಂದು ಮೆನೇಜರ್ ತಿಳಿಸಿದರು ಎಂದು ಬಶೀರ್ ಪತ್ರಿಕೆಗೆ ಹೇಳಿದ್ದಾರೆ.
ತನಿಖೆಗೆ ಸೂಚನೆ: ಇಂದು ವಿಟ್ಲದ ಎಟಿಎಂಗೆ ಹಣ ಲೋಡ್ ಮಾಡಿದ ಬಳಿಕ ಮೂವರು ಗ್ರಾಹಕರಿಗೆ ಎರಡು ಸಾವಿರ ಮುಖ ಬೆಲೆಯ ಹರಿದ ನೋಟುಗಳು ದೊರೆತ್ತಿರುವ ಬಗ್ಗೆ ದೂರುಗಳು ಬಂದಿದೆ. ಹಳೆ ಹಾಗೂ ಹರಿದ ನೋಟುಗಳು ಎಟಿಎಂ ಸ್ವೀಕರಿಸುವುದಿಲ್ಲವಾದರೂ ಯಾಕೆ ಹೀಗಾಯಿತು ಎಂಬುದು ಅರ್ಥವಾಗುತ್ತಿಲ್ಲ. ಎಟಿಎಂನಲ್ಲಿ ಹರಿದ ನೋಟು ಸಿಕ್ಕಿರುವ ಬಗ್ಗೆ ಬ್ಯಾಂಕ್‍ನ ಮೇಲಾಧಿಕಾರಿಗಳಿಗೆ ಹಾಗೂ ಎಟಿಎಂಗೆ ಹಣ ಲೋಡ್ ಮಾಡುವ ಗುತ್ತಿಗೆ ವಹಿಸಿರುವ ಸಿಎಂಎಸ್ ಏಜೆನ್ಸಿಯ ಅಧಿಕಾರಿಗಳಿಗೂ ಕರೆ ಮಾಡಿ ಮಾಹಿತಿ ನೀಡಿದ್ದು ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಹರಿದ ನೋಟು ಸಿಕ್ಕಿರುವ ಗ್ರಾಹಕರು ಬ್ಯಾಂಕ್‍ಗೆ ಬಂದು ನೋಟು ಬದಲಾವಣೆ ಮಾಡಬಹು ಎಂದು ತನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕರ್ನಾಟಕ ಬ್ಯಾಂಕ್‍ನ ಕಡಬ ಶಾಖೆಯ ಮೆನೇಜರ್ ಶ್ರೀಹರಿ ತಿಳಿಸಿದ್ದಾರೆ.
