ಬಂಟ್ವಾಳ : ಬಿ.ಸಿ.ರೋಡಿನ ಕೇಂದ್ರ ಭಾಗದಲ್ಲಿರುವ ಸ್ವಾತಂತ್ರ್ಯ ಪೂರ್ವದ ಹಳೆ ಕಟ್ಟಡ ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಚೇರಿ ಕೆಲವೇ ತಿಂಗಳುಗಳಲ್ಲಿ ಧರಾಶಾಯಿಯಾಗಲಿದೆ. ಈ ಕಚೇರಿ ಮುಂದೆ ಪಕ್ಕದಲ್ಲೇ ನೂತನವಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧದ ಮೊದಲ ಅಂತಸ್ತಿಗೆ ಶಿಫ್ಟ್ ಆಗಲಿದೆ. ಬಳಿಕ ಈಗಿರುವ ಕಟ್ಟಡದ ಜಾಗ ಪಾರ್ಕಿಂಗ್‍ಗೆ ಉಪಯೋಗವಾಗುವ ನಿರೀಕ್ಷೆ ಇದೆ. ಹಾಗೆಯೇ ಬಂಟ್ವಾಳ ತಾಲೂಕಿನ ಹಳೇಯ ಕಟ್ಟಡಗಳಾದ ತಾಲೂಕು ಪಂಚಾಯಿತಿಯ ಹಳೇ ಕಟ್ಟಡ, ಪಕ್ಕದಲ್ಲೆ ಇರುವ ಪ್ರಸ್ತುತ ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಚುನಾವಣಾ ಶಾಖಾ ಕಚೇರಿ ಕಾರ್ಯಾಚರಿಸುತ್ತಿರುವ ಮಹಾತ್ಮಾ ಗಾಂಧಿ ಜನ್ಮಶತಾಬ್ಧಿ ಸ್ಮಾರಕ ಭವನ, ಇನ್ನು ಇತಿಹಾಸದ ಪುಟ ಸೇರಲಿವೆ. ಬದಲಾವಣೆಯ ಕಾಲಘಟ್ಟದಲ್ಲಿ ಬಿ.ಸಿ.ರೋಡಿನ ಹಳೇ ಬಿಡಿಒ ಕಚೇರಿ (ತಾಲೂಕು ಪಂಚಾಯತ್) ಹೀಗಿರುವ ಪಾಣೆಮಂಗಳೂರು ಹೋಬಳಿಯ ನಾಡ ಕಚೇರಿ, ಸಮಾಜ ಕಲ್ಯಾಣ, ಆಹಾರ, ಸಾಮಾಜಿಕ ಅರಣ್ಯ ಇಲಾಖೆ ಸಹಿತ ಪ್ರಮುಖ ಚಟುವಟಿಕೆಗಳ ಕೇಂದ್ರಬಿಂದುವಾಗಿದ್ದ ಕಟ್ಟಡಗಳಿನ್ನು ಕಾಲಗರ್ಭದಲ್ಲಿ ಸೇರುವ ಕಾಲ ಸನ್ನಿಹಿತವಾಗಿದ್ದು ಭವಿಷ್ಯದಲ್ಲಿ ಈ ಜಾಗದಲ್ಲಿ ಪಿಪಿಪಿ ಮಾದರಿಗೆ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ಎದ್ದು ನಿಲ್ಲಲಿದೆ.
ಬಿ.ಸಿ.ರೋಡಿನಲ್ಲಿ ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಟ್ಟಡ ನಿರ್ಮಾಣಗೊಂಡದ್ದು 1924ರಲ್ಲಿ. ಸಬ್ ರಿಜಿಸ್ಟ್ರಾರ್ ಕಚೇರಿ 1865ನೇ ಇಸವಿಯಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯವಿದ್ದಾಗ ಆರಂಭಗೊಂಡಿತ್ತು. ಇದಕ್ಕೂ ಮೊದಲು ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಕಟ್ಟಡದಲ್ಲಿ ಕಾರ್ಯಾಚರಿಸಿದ್ದ ಸಬ್ ರಿಜಿಸ್ಟ್ರಾರ್ ಕಚೇರಿ, 1921ರ ನೇತ್ರಾವತಿ ನದಿ ಪ್ರವಾಹಕ್ಕೆ ಕೊಚ್ಚಿ ಹೋಯಿತು. ಬಳಿಕ 1924ರಲ್ಲಿ ಹೊಸ ಕಟ್ಟಡ ನಿರ್ಮಿಸಿ, ಕಚೇರಿಯನ್ನು ವರ್ಗಾಯಿಸಲಾಯಿತು. ಈಗಲೂ ಅದೇ ಕಚೇರಿಯಲ್ಲಿ ನೋಂದಣಿ ನಡೆಯುತ್ತಿದೆ. ಆದರೆ ಮಿನಿ ವಿಧಾನಸೌಧಕ್ಕೆ ಶಿಫ್ಟ್ ಆಗುವ ಕಾರಣ ಈ ಕಟ್ಟಡದ ಆಯಸ್ಸು ಮುಗಿಯುತ್ತಾ ಬಂದಿದೆ.
ಸಬ್ ರಿಜಿಸ್ಟ್ರಾರ್ ಕಚೇರಿ ಎದುರೇ ಇರುವ ಮಹಾತ್ಮಾ ಗಾಂಧಿ ಜನ್ಮಶತಾಬ್ಧಿ ಭವನವನ್ನು ಅಂದಿನ ಮೈಸೂರು ಸರಕಾರದ ಸಹಕಾರ ಸಚಿವ ಎ.ಶಂಕರ ಆಳ್ವ ಉದ್ಘಾಟಿಸಿದ್ದರು. ಶಾಸಕ ಬಿ.ವಿ.ಕಕ್ಕಿಲ್ಲಾಯ ಅಧ್ಯಕ್ಷತೆ ವಹಿಸಿದ್ದರು. 1978ನೇ ಇಸವಿ, ಜೂನ್ 11ರಂದು ಉದ್ಘಾಟನೆಗೊಂಡಿದ್ದ ಈ ಕಟ್ಟಡ ಬಂಟ್ವಾಳ ತಾಲೂಕು ಅಭಿವೃದ್ಧಿ ಮಂಡಳಿ ಸುಪರ್ದಿಯಲ್ಲಿತ್ತು. 1970ರಲ್ಲಿ ಈ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ಆಹಾರ ಸಚಿವ ವಿಠಲದಾಸ ಶೆಟ್ಟಿ ನೆರವೇರಿಸಿದ್ದರು. ಆಗ ಎಂಎಲ್ ಎ ಆಗಿದ್ದವರು ಕೆ.ಲೀಲಾವತಿ ರೈ.
ಈ ಕಟ್ಟಡದ ಪಕ್ಕವೇ ನಿರ್ಮಾಣಗೊಂಡಿದ್ದ ಕಚೇರಿಗಳ ಕಟ್ಟಡವನ್ನು ಭಾರತ ಸರಕಾರದ ಸಂಸದೀಯ ಕಾರ್ಯದರ್ಶಿ ದೊಡ್ಡ ತಮ್ಮಯ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಗಿನ ಎಂಎಲ್ ಸಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದ ಕೆ.ಕೆ.ಶೆಟ್ಟಿ ವಹಿಸಿದ್ದರು. 1964ರ ಮೇ 19ರಂದು ಈ ಕಟ್ಟಡ ಲೋಕಾರ್ಪಣೆಗೊಂಡಿತ್ತು. ಇದೇ ಕಟ್ಟಡದ ಶಂಕುಸ್ಥಾಪನೆಯನ್ನು ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ 1962ರ ಅಕ್ಟೋಬರ್ 13ರಂದು ನೆರವೇರಿಸಿದ್ದರು. ಅಂದು ತಾಲೂಕು ಅಭಿವೃದ್ಧಿ ಮಂಡಳಿ (ತಾಲೂಕು ಬೋರ್ಡ್) ಪ್ರಭಾವಶಾಲಿಯಾಗಿತ್ತು.
ಪ್ರಥಮ ಅವಧಿ ತಾಲೂಕು ಬೋರ್ಡಿನ ಅಧ್ಯಕ್ಷರಾಗಿ ಕಾಡುಮಠ ಮಹಾಬಲ ಶೆಟ್ಟಿ ಕಾರ್ಯನಿರ್ವಹಿಸಿದ್ದರೆ ಬರಂಗರೆ ಸದಾನಂದ ಪೂಂಜರವರು ಉಪಾಧ್ಯಕ್ಷರಾಗಿದ್ದರು. ಬಳಿಕ ರಾಯಿ ಸದಾಶಿವ ಭಂಡಾರಿ ಸಹಿತ ಪ್ರಮುಖ ರಾಜಕಾರಣಿಗಳು ಅಂದು ತಾಲೂಕು ಮಟ್ಟದಲ್ಲಿ ಪ್ರಮುಖ ಸ್ಥಾನಗಳಲ್ಲಿ ಮಿಂಚಿದ್ದರು. ಬಿಡಿಒ ಹಾಲ್‍ನಲ್ಲಿ ತಾಲೂಕಿನ ಮಹತ್ವದ ರಾಜಕೀಯ, ಆಡಳಿತಾತ್ಮಕ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿತ್ತು.
ಬಂಟ್ವಾಳ ಪರಿಸರದ ಪ್ರಮುಖ ಕಾರ್ಯಕ್ರಮಗಳಿಗೆ ಇದೇ ಬಿಡಿಒ ಹಾಲ್ (ಮಹಾತ್ಮಾಗಾಂಧಿ ಜನ್ಮಶತಾಬ್ದಿ ಭವನ) ಬೇಕಾಗುತ್ತಿತ್ತು. ಪ್ರತಿದಿನ ಎಂಬಂತೆ ಇಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕ್ರಮೇಣ ತಾಲೂಕು ಪಂಚಾಯಿತಿ ಕಚೇರಿ ಕೂಡಾ ಪಕ್ಕದ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಹಿಂಬಾಗಕ್ಕೆ ಸ್ಥಳಾಂತರಗೊಂಡಿತ್ತು. ಹಾಗೆಯೇ ಹಳೆ ತಾಲೂಕು ಕಚೇರಿಯ ಕಟ್ಟಡವನ್ನು ಕೆಡವಿ ಅಲ್ಲಿ ನೂತನವಾಗಿ ಮಿನಿ ವಿಧಾನಸೌಧದ ಕಾಮಗಾರಿ ನಡೆಯುತ್ತಿರುವುದರಿಂದ ಹಳೆ ತಾಲೂಕು ಪಂಚಾಯತ್ ಕಟ್ಟಡದಲ್ಲಿ ತಾತ್ಕಾಲಿಕ ಮಟ್ಟಕ್ಕೆ ಕಂದಾಯ ಇಲಾಖೆಯ ಆಹಾರ ಶಾಖೆ, ಸಾಮಾಜಿಕ ಅರಣ್ಯ ಇಲಾಖೆ, ನಾಡಕಚೇರಿಯಂಥ ಕೆಲ ಕಚೇರಿಗಳು ಕಾರ್ಯಾಚರಿಸುತ್ತಿವೆ.
ಶಾಸಕರ ಕಚೇರಿ ಇತ್ತು : ಎ.ರುಕ್ಮಯ ಪೂಜಾರಿ ಅವರು ಶಾಸಕರಾಗಿದ್ದ ಸಂದರ್ಭ ಅವರ ಕಚೇರಿ ಇದೇ ಕಟ್ಟಡದಲ್ಲಿತ್ತು. ಅವರ ಬಳಿಕ ಕೆ.ಎಂ.ಇಬ್ರಾಹಿಂ, ಪದ್ಮನಾಭ ಕೊಟ್ಟಾರಿಯವರ ಕಚೇರಿಗಳೂ ಇಲ್ಲೇ ಕಾರ್ಯಾಚರಿಸಿದವು. ನಾಗರಾಜ ಶೆಟ್ಟರ ಕಚೇರಿಯೂ ಇಲ್ಲೇ ಇತ್ತು. ರುಕ್ಮಯ ಪೂಜಾರಿ, ಕೆ.ಎಂ.ಇಬ್ರಾಹಿಂ ಮತ್ತು ಕೊಟ್ಟಾರಿ ಅವರು ಇಲ್ಲೇ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದರು. ಇದರ ಜೊತೆಗೆ ತಾ.ಪಂ. ಅಧ್ಯಕ್ಷ ಉಪಾದ್ಯಕ್ಷರುಗಳು ಕೂಡ ಇಲ್ಲಿ ಕಚೇರಿಯನ್ನು ಹೊಂದಿ ಕಾರ್ಯಭಾರ ಮಾಡುತ್ತಿದ್ದರು.
ಈಗ ಧರೆಗುರುಳಲು ಸಿದ್ಧವಾಗುತ್ತಿರುವ ಕಚೇರಿಗಳು ಇವು. ತಾಲೂಕು ಪಂಚಾಯಿತಿ (ಹಿಂದಿನ ತಾಲೂಕು ಅಭಿವೃದ್ಧಿ ಮಂಡಳಿ) ಹಳೇ ಕಟ್ಟಡ. ಸಬ್ ರಿಜಿಸ್ಟ್ರಾರ್ ಕಚೇರಿ ಹಾಗೂ ತಾಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣ. ಇದರ ಜೊತೆಗೆ ಜೇನು ವ್ಯವಸಾಯ ಮಂಡಳಿಯ ಕಟ್ಟಡ. ಇವುಗಳಲ್ಲಿ ಅಳಿದುಳಿದ ಕಚೇರಿಗಳು ಮಿನಿ ವಿಧಾನಸೌಧಕ್ಕೆ ಶಿಫ್ಟ್ ಆಗಲಿವೆ. ಸಬ್ ರಿಜಿಸ್ಟ್ರಾರ್ ಕಚೇರಿಯ ಜಾಗ ಪಾರ್ಕಿಂಗ್‍ಗೆ ಮೀಸಲಾದರೆ ಉಳಿದ ಕಟ್ಟಡದ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಸುಮಾರು 84 ಸೆಂಟ್ಸ್ ಜಾಗದಲ್ಲಿ ಮತ್ತೊಂದು ಬದಲಾವಣೆಗೆ ಬಿ.ಸಿ.ರೋಡ್ ಸಜ್ಜಾಗಲಿದೆ.
ಖಾಸಗಿ ಬಸ್ಸು ನಿಲ್ಧಾಣ ನಿರ್ಮಿಸುವ ನಿಟ್ಟಿನಲ್ಲಿ ಈಗಾಗಲೇ ಸಚಿವ ರಮಾನಾಥ ರೈಯವರು ಅಧಿಕಾರಿಗಳ ಜತೆ ಒಂದೆರಡು ಸಭೆಯನ್ನು ಕೂಡ ನಡೆಸಿದ್ದು ಈ ಬಗ್ಗೆ ಅಂದಾಜು ಪಟ್ಟಿ ಹಾಗೂ ನೀಲನಕ್ಷೆಯನ್ನು ತಯಾರಿಸುವಂತೆ ಸೂಚಿಸಿದ್ದಾರೆ. ಸಚಿವ ರಮಾನಾಥ ರೈಯವರ ಪರಿಕಲ್ಪನೆಯಡಿ ಇಲ್ಲಿ ಖಾಸಗಿ ಬಸ್ಸು ನಿಲ್ದಾಣ ನಿರ್ಮಾಣವಾಗುತ್ತಿದೆ. ಈಗಿರುವ ತಾ.ಪಂ.ನವಾಣಿಜ್ಯ ಸಂಕಿರ್ಣವನ್ನು ಕೂಡ ಕೆಡವಲಾಗುತ್ತಿದೆ.
ಸರ್ವೆ : ತಾಲೂಕು ಪಂಚಾಯಿತಿ ಹಳೇ ಕಟ್ಟಡ ಇದ್ದ ಜಾಗದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಜಾಗದ ಅಳತೆ ಮಾಡುವ ಕಾರ್ಯ ಬುಧವಾರ ನಡೆಯಿತು. ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಇಒ ಸಿಪ್ರಿಯಾನ್ ಮಿರಾಂದ, ಸರ್ವೇ ಇಲಾಖೆ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ವೆಂಕಟೇಶ್ ಬಂಟ್ವಾಳ.
