ಬಂಟ್ವಾಳ: ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ವತಿಯಿಂದ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣಕ್ಕೆ ಸೋಮವಾರ ಚಾಲನೆ ದೊರಕಿತು.
ಮೌಖಿಕ ಕಥನ ಮತ್ತು ಭೌತಿಕ ವಸ್ತುಗಳು ಸಾಮಾಜಿಕ ಚರಿತ್ರೆಯ ಪುನರ್ ರಚನೆ ಎಂಬ ವಿಷಯದಲ್ಲಿ ಆರಂಭಗೊಂಡ ಈ ವಿಚಾರಸಂಕಿರಣವನ್ನು ದೀಪ ಬೆಳಗಿಸುವ ಮೂಲಕ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಡಾ.ನಿರಂಜನ ವಾನಳ್ಳಿ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಸಂಗ್ರಹಿಸಿದ ಪ್ರತಿಯೊಂದು ವಸ್ತುವಿನಲ್ಲೂ ಕಥೆ ಇದೆ. ತಲೆಮಾರುಗಳ ಚರಿತ್ರೆಯನ್ನು ನಮ್ಮ ಪಳೆಯುಳಿಕೆಗಳು ಸಾರಿ ಹೇಳುತ್ತವೆ. ಹೊಸ ಜನಾಂಗ ನಮ್ಮ ಹಿರಿಯ ವಿದ್ವಾಂಸರ ಕುರಿತು ಇಂದು ಅಸಹಿಷ್ಣುತೆ ತಾಳಿದ್ದು ಖೇದನೀಯ. ಇಂದು ಸಂಶೋಧನೆಗೆ ಒಳಪಡಬೇಕಾದ ವ್ಯಕ್ತಿಗಳು ಇನ್ನೂ ಉಳಿದಿದ್ದಾರೆ. ಅವುಗಳ ಕುರಿತು ಗಮನಹರಿಸಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಿಧಾನಪರಿಷತ್ತು ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ವಹಿಸಿದ್ದರು. ಅವರು ಮಾತನಾಡಿ, ಇಂದು ಚರಿತ್ರೆ ನಮಗೆ ಜೀವನದರ್ಶನ ನೀಡುತ್ತದೆ ಎಂಬುದನ್ನು ಗಮನಹರಿಸಬೇಕು.ಭಾರತೀಯ ಇತಿಹಾಸವನ್ನು ಭಾರತೀಯ ದೃಷ್ಟಿಕೋನದಲ್ಲಿ ನೋಡುವ ಪ್ರಾಮಾಣಿಕ ಪ್ರಯತ್ನ ನಡೆಯಲಿ ಎಂದು ಹಾರೈಸಿದರು. ಉಪನ್ಯಾಸಕ ಚೇತನ್ ಮುಂಡಾಜೆ ಹಾಜರಿದ್ದರು.
ವಿಚಾರಸಂಕಿರಣದ ಸಂಯೋಜಕಿ ಡಾ.ಆಶಾಲತಾ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ಸ್ವಾಗತಿಸಿದರು. ಮಂಗಳೂರು ವಿವಿ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಸುರೇಂದ್ರ ರಾವ್ ದಿಕ್ಸೂಚಿ ಭಾಷಣ ಮಾಡಿದರು. ಡಾ.ಸಾಯಿಗೀತಾ ವಂದಿಸಿದರು. ಸಿಂಧೂರ ಕಾರ್ಯಕ್ರಮ ನಿರೂಪಿಸಿದರು.
