ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಸಂಚಯಗಿರಿಯಲ್ಲಿ ಬಂಟ್ವಾಳ ಎಸ್ವಿಎಸ್ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೆ.ತುಕಾರಾಮ ಪೂಜಾರಿ ಮತ್ತು ಉಪನ್ಯಾಸಕಿ ಡಾ.ಆಶಾಲತಾ ಎಸ್.ಸುವರ್ಣ ಇವರು ಮುನ್ನಡೆಸುತ್ತಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ‘ಕಿರೀಟ’ಕ್ಕೆ ಇಲ್ಲಿ ನಿರ್ಮಾಣಗೊಂಡ ಎಸ್.ಯು.ಪಣಿಯಾಡಿ ಗ್ರಂಥಾಲಯ ಸಂಕೀರ್ಣ ಮತ್ತು ಜಾನಪದ ಪರಿಷತ್ ಜಿಲ್ಲಾ ಘಟಕ ಆರಂಭಗೊಳ್ಳುವ ಮೂಲಕ ‘ಹೊಸ ಗರಿ’ ಬಂದಂತಾಗಿದೆ.
ಸರ್ಕಾರದಿಂದ ಯಾವುದೇ ನೆರವು ಇಲ್ಲದಿದ್ದರೂ ಸ್ವಂತ ಮತ್ತು ದಾನಿಗಳ ನೆರವಿನಿಂದಲೇ ನಿಮರ್ಾಣಗೊಂಡ ಇಲ್ಲಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ಎಸ್.ಯು.ಪಣಿಯಾಡಿ ಗ್ರಂಥಾಲಯ ಸಂಕೀರ್ಣವು ಇತಿಹಾಸ ವಿದ್ಯಾರ್ಥಿ ಗಳಿಗೆ ರಾಷ್ಟ್ರೀಯ ಮಟ್ಟದ ಐತಿಹಾಸಿಕ ಮಾಹಿತಿ ನೀಡುವ ಮೂಲಕ ಇತರರಿಗೆ ಮಾದರಿಯಾಗಿದೆ.
ಇತಿಹಾಸ ಎಂದರೆ ಕೇವಲ ರಾಜ ಮಹಾರಾಜರ ಕಥೆಯಲ್ಲ. ಸಮಾಜದಲ್ಲಿ ಜೀವನ ನಡೆಸಿದ ಪ್ರತಿಯೊಂದು ಮನುಷ್ಯನಿಗೂ ತನ್ನದೇ ಆದ ಸಾಂಸ್ಕೃತಿಕ ಮತ್ತು ಜಾನಪದ ಹಿನ್ನೆಲೆಯಿದೆ ಎಂಬ ಅಂಶ ಇಲ್ಲಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಪ್ರವೇಶಿಸಿದಾಗ ಅನುಭವಕ್ಕೆ ಬರುತ್ತದೆ. ಮುಖ್ಯವಾಗಿ ತುಳುನಾಡಿನಲ್ಲಿ ನಮ್ಮ ಹಿರಿಯರು ಉಪಯೋಗಿಸಿದ್ದರು ಎನ್ನಲಾದ ಕೆಲವೊಂದು ಸಾಮಾಗ್ರಿಗಳು, ಸಾಮಾನ್ಯರ ಕಣ್ಣಿಗೆ ಅತಿ ಸಾಮಾನ್ಯವಾಗಿ ಕಾಣುವ ಬೆಲೆ ಕಟ್ಟಲಾಗದ ವಸ್ತುಗಳನ್ನು ಊರೂರು ತಿರುಗಿ ಪ್ರೊ.ತುಕಾರಾಮ ಪೂಜಾರಿ ಸಂಗ್ರಹಿಸಿದ್ದಾರೆ. ಆರಂಭದಲ್ಲಿ ಮನೆಯಲ್ಲಿ ಸಂಗ್ರಹಿಸಿಟ್ಟ ವಿವಿಧ ಬಗೆಯ ಸಾಮಾಗ್ರಿ ಮತ್ತು ಪರಿಕರಗಳನ್ನು ಜೋಡಿಸಿ ಪ್ರದರ್ಶನಗೊಳಿಸಲು ಮನೆ ಪಕ್ಕದಲ್ಲೇ ಜಾಗ ಖರೀದಿಸಿ ಸುಂದರ ಮತ್ತು ಅಚ್ಚುಕಟ್ಟಾದ ಗ್ಯಾಲರಿ ನಿರ್ಮಿಸುವ ಮೂಲಕ ಇದೀಗ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವಂತಾಗಿದೆ.
ಈಗಾಗಲೇ ಹಲವಾರು ಬಾರಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಚಿತ್ರಕಲಾ ರಚನೆ ಮತ್ತು ಪ್ರದರ್ಶನ, ಉಪನ್ಯಾಸ ಹೀಗೆ ನಿರಂತರವಾಗಿ ತುಳು ಮತ್ತು ಕನ್ನಡ ಭಾಷೆ ಜೊತೆಗೆ ತುಳುನಾಡಿನ ಇತಿಹಾಸವನ್ನು ಮತ್ತೆ ಮತ್ತೆ ಮೆಲುಕು ಹಾಕುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಇದರಿಂದಾಗಿ ಇತಿಹಾಸ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಸ್ತು ಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರವಾಗಿ ನೆರಳು ನೀಡುತ್ತಿದೆ.
ಕಳೆದ 1995ರಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಆರಂಭಿಸಿದ ಇವರು 2011ರಲ್ಲಿ ರಾಣಿ ಅಬ್ಬಕ್ಕ ಆರ್ಟ್ ಗ್ಯಾಲರಿ ನಿರ್ಮಿಸಿ ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಒಟ್ಟು 24 ಮಂದಿ ಅಂತರ್ ರಾಷ್ಟ್ರೀಯ ಕಲಾವಿದರ ಕುಂಚದಿಂದ ವಿಭಿನ್ನ ಶೈಲಿಯಲ್ಲಿ ಮೂಡಿ ಬಂದ ‘ರಾಣಿ ಅಬ್ಬಕ್ಕನ ಹೋರಾಟದ ಬದುಕು’ ನೆನಪಿಸುವ ಚಿತ್ರ ರಚನೆ ಇಂದಿಗೂ ಗ್ಯಾಲರಿಯಲ್ಲಿ ರಾರಾಜಿಸುತ್ತಿದೆ. ಮಾತ್ರವಲ್ಲದೆ ಉಳ್ಳಾಲದಲ್ಲಿ ಪೋಚರ್ುಗೀಸರ ವಿರುದ್ಧ ಕುದುರೆಯನ್ನೇರಿ ಒಂಟಿಯಾಗಿ ಹೋರಾಡಿದ ವೀರ ವನಿತೆ ರಾಣಿ ಅಬ್ಬಕ್ಕನ ಜೀವನ ಚರಿತ್ರೆಯನ್ನು ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರತನಕ ಈ ಚಿತ್ರಗಳು ಇತಿಹಾಸದ ಕಥೆಯನ್ನು ಮತ್ತೆ ಮತ್ತೆ ತಿಳಿ ಹೇಳುವಂತಿದೆ.
ಈ ಸಂದರ್ಭದಲ್ಲಿ ಭೇಟಿ ನೀಡಿದ್ದ ಧರ್ಮಸ್ಥಳ ಧಮರ್ಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಂದಲೂ ಪ್ರೊ.ಕೆ.ತುಕಾರಾಮ ಪೂಜಾರಿ ದಂಪತಿ ಏಕಾಂಗಿ ಸಾಧನೆ ಬಗ್ಗೆ ವ್ಯಾಪಕ ಮೆಚ್ಚುಗೆ ದೊರೆತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇದೀಗ ಏ.1ರಿಂದ 4ರತನಕ ಇಲ್ಲಿ ಆಯೋಜಿಸಲಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಗ್ರಂಥಾಲಯ ಸಂಕೀರ್ಣ ಲೋಕಾರ್ಪಣೆ ಸಹಿತ ರಾಜ್ಯ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಉದ್ಘಾಟನೆಗೊಳ್ಳಲಿದೆ. ಇನ್ನೊಂದೆಡೆ ಮೌಖಿಕ ಕಥನ ಮತ್ತು ಭೌತಿಕ ವಸ್ತುಗಳು ಸಾಮಾಜಿಕ ಚರಿತ್ರೆಯ ಪುನರ್ ರಚನೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವೂ ನಡೆಯುವ ಮೂಲಕ ಗಮನ ಸೆಳೆಯಲಿದೆ.
-ಮೋಹನ್ ಕೆ.ಶ್ರೀಯಾನ್ ರಾಯಿ
