ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ, ಕೆರೆ ಒತ್ತುವರಿಯನ್ನು ತೆರವು ಗೊಳಿಸಿ ಅಭಿವೃದ್ಧಿ ಪಡಿಸಲು ಗಮನಹರಿಸುವುದಾಗಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಸದಾಶಿವ ಬಂಗೇರ ರವರು ತಿಳಿಸಿದ್ದಾರೆ. ಪುರಸಭಾ ಕಛೇರಿಯ ಸಭಾಂಗಣದಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸುವುದಾಗಿ ಅವರು ಭರವಸೆ ನೀಡಿದರು. ಬಂಟ್ವಾಳದ ಸಮಗ್ರ ಅಭಿವೃದ್ಧಿಯ ದೆಸೆಯಲ್ಲಿ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ರ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವುದಾಗಿ ತಿಳಿಸಿದ ಅವರು, ಸರಕಾರದ ನಿರ್ದೇಶನಗಳನ್ವಯ ಕಾನೂನು ಚೌಕಟ್ಟಿನೊಳಗೆ ತನ್ನ ಕೆಲಸವನ್ನು ಕೈಗೆತ್ತಿಕೊಳ್ಳುವುದಾಗಿ ಅವರು ತಿಳಿಸಿದರು. ಸರ್ಕಾರದ ಕಟ್ಟಡಗಳು ಯಾವುದೇ ಗೋದಾಮಿನಂತಾಗದೆ ಅದೊಂದು ಸುಂದರ ಹಾಗೂ ಆಕರ್ಷಕ ರೀತಿಯಲ್ಲಿ ನಿರ್ಮಾಣವಾಗಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಯೋಜನೆಯನ್ನು ರೂಪಿಸಬೇಕೆಂದು ಸದಾಶಿವ ಬಂಗೇರ ಸಲಹೆ ನೀಡಿದರು.

ಕೋಟಿ ಚೆನ್ನಯ್ಯ ರಂತೆ ಕೆಲಸ..
ಇದೇ ವೇಳೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಣಾಡಿದ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅವರು ಮಾತನಾಡಿ ನಾವಿಬ್ಬರೂ ಈ ಹಿಂದೆ ಒಂದೇ ತಂಡದಲ್ಲಿ ದುಡಿದವರಾಗಿದ್ದೇವೆ. ಕ್ರೀಡಾ ಕ್ರೂಟಗಳಲ್ಲೂ ಜೊತೆಯಾಗಿಯೇ ಭಾಗವಹಿಸಿದವರಾಗಿದ್ದೇವೆ. ಈಗ ಬಂಟ್ವಾಳ ಪುರಸಭೆಯ ಅಭಿವೃದ್ಧಿಗಾಗಿ ನಾವಿಬ್ಬರೂ ಕೋಟಿ ಚೆನ್ನಯ್ಯರಂತೆ ಕೆಲಸಮಾಡುವುದಾಗಿ ಘೋಷಿಸಿದರು.
ಪುರಸಭಾ ಅಧ್ಯಕ್ಷ ಆಯ್ಕೆಯ ವೇಳೆ ನಮ್ಮಿಬ್ಬರ ನಡುವೆ ಉಂಟಾಗಿದ್ದ ಮುನಿಸು, ಗೊಂದಲ ಈಗ ಬಗೆಹರಿದಿದೆ. ಪಕ್ಷದ, ಸಂಘಟನೆ ಮತ್ತು ಅಭಿವೃದ್ಧಿಯ ದಿಸೆಯಲ್ಲಿ ನಾವಿಬ್ಬರು ಜೊತೆಯಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಅಧಿಕಾರ ಹಸ್ತಾಂತರಿಸಿದ ಯೋಜನಾ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಅವರು ಮಾತನಾಡಿ, ಪುರಸಭೆ ವಾಸಿಗಳು ಯಾವುದೇ ಕಟ್ಟಡಗಳನ್ನು ನಿರ್ಮಿಸುವ ಮೊದಲೇ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಇತ್ತೀಚೆಗಿನ ದಿನಗಳಲ್ಲಿ ಕಟ್ಟಡ ನಿರ್ಮಾಣದ ಬಳಿಕ ಪರವಾಣಿಗೆ ಪಡೆಯುವ ಪದ್ಧತಿ ಬೆಳೆದಿದೆ. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್‍ನ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ ಶುಭ ಹಾರೈಸಿದರು. ಜಪಂ ಸದಸ್ಯರಾದ ಪದ್ಮಶೇಖರ್ ಜೈನ್, ಶಾಹುಲ್ ಹಮೀದ್, ರವೀಂದ್ರ ಕಂಬಳಿ, ಮಂಜುಳಾ ಮಾವೆ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿಲ್ಲಾ ಮುಖಂಡ ಹರಿಕೃಷ್ಣ ಬಂಟ್ವಾಳ, ತಾಪಂ ಸದಸ್ಯ ಪ್ರಭಾಕರ್ ಪ್ರಭು, ಕುಮಾರ ಭಟ್, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ್ ಪೂಜಾರಿ, ಪುರಸಭಾ ವಿಪಕ್ಷ ಸದಸ್ಯರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಸುಗುಣಕಿನಿ, ಮುನೀಶ್ ಅಲಿ, ಬಿ.ಮೋಹನ್ ಹಾಗೂ ಕಾಂಗ್ರೆಸ್ ಪುರಸಭಾ ಸದಸ್ಯರು ವಾಸು ಪೂಜಾರಿ, ಪ್ರವೀಣ್, ಗಂಗಾಧರ, ವಸಂತಿ, ಯಾಸ್ಮೀನ್, ಚಂಚಲಾಕ್ಷಿ, ಪ್ರಭಾ ಆರ್. ಸಾಲ್ಯಾನ್, ಮುಖಂಡ ಮುಹಮ್ಮದ್ ನಂದಾವರ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬಂಗೇರರವರನ್ನು ಅಬಿನಂದಿಸಿದರು.
ಉಪಾಧ್ಯಕ್ಷ ಗೈರು
ಸದಾಶಿವ ಬಂಗೇರ ಅವರ ಅಧಿಕಾರ ಸ್ವೀಕಾರದ ಈ ಸರಳ ಸಮಾರಂಭದಲ್ಲಿ ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಅವರ ಗೈರು ಎದ್ದು ಕಾಣುತ್ತಿತ್ತು. ಅಧಿಕಾರ ಸ್ವೀಕಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಅಗತ್ಯ ಕೆಲಸದ ನಿಮಿಥ ಬೆಂಗಳೂರಿನಲ್ಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
