ಬಂಟ್ವಾಳ: ಸಮಾಜದಲ್ಲಿ ಸಂಘಟನೆ ಮೂಲಕ ಸಾಮಾಜಿಕ ಸೇವೆ ಸಾಧ್ಯವಾಗುತ್ತಿದ್ದು, ಎಲ್ಲರ ಸಹಕಾರದಲ್ಲಿ ಸಾಮಾಜಿಕ ಪರಿವರ್ತನೆಗೊಳಿಸಲು ಸಾಧ್ಯವಿದೆ ಎಂದು ಚಲನಚಿತ್ರ ನಟ, ಪಡುಮಲೆಕುತ್ಯಾಲ ಶ್ರೀ ಮಹಾವಿಷ್ಣು ದೇವಸ್ಥಾನ ಆಡಳಿತ ಮೊಕ್ತೇಸರ ವಿನೋದ್ ಆಳ್ವ ಹೇಳಿದ್ದಾರೆ.
ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಮತ್ತು ಜೆ.ಸಿ.ಐ.ಮಡಂತ್ಯಾರು ಇದರ ವತಿಯಿಂದ ಭಾನುವಾರ ನಡೆದ 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ವಕೀಲೆ ಸ್ವರ್ಣಲತಾ ವಸಂತ ಹೆಗ್ಡೆ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರ, ಬೆಳ್ತಂಗಡಿ ಬಿಜೆಪಿ ಅಧ್ಯಕ್ಷ ರಂಜನ್ ಗೌಡ, ಉದ್ಯಮಿ ಜಿತೇಂದ್ರ ಎಸ್.ಕೊಟ್ಟಾರಿ, ಬಿಲ್ಲವ ಮಹಾಮಂಡಲ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ಸ್ವಸ್ತಿ ಸಿರಿ ಮತ್ತು ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯ ರಮೇಶ್ ಕುಡ್ಮೇರು, ಡಾ.ಬಾಲಕೃಷ್ಣ ಶೆಟ್ಟಿ, ಸುಂದರ ರಾಜ್ ಹೆಗ್ಡೆ, ರಶ್ಮಿ, ಹುಕುಂ ರಾಂ ಪಠೇಲ್, ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಪುಂಜಾಲಕಟ್ಟೆ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಕುಮಾರ್, ಉದ್ಯಮಿ ಹರೀಂದ್ರ ಪೈ, ಸುಬ್ಬಣ್ಣ, ಚೆನ್ನಕೇಶವ, ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಮಡಂತ್ಯಾರು ಜೆಸಿಐ ಅಧ್ಯಕ್ಷ ರಾಜೇಶ್ ಪಿ.ಪುಂಜಾಲಕಟ್ಟೆ ಮತ್ತಿತರರು ಇದ್ದರು.
ಆರಂಭದಲ್ಲಿ ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯ ಬಳಿ ಆಕರ್ಷಕ ದಿಬ್ಬಣ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗೊಂಬೆ ಕುಣಿತ, ಬ್ಯಾಂಡು ವಾದ್ಯ, ಚೆಂಡೆ, ನಾಸಿಕ್ ಬ್ಯಾಂಡ್, ಸಮವಸ್ತ್ರಧಾರಿ ವಿದ್ಯಾರ್ಥಿಗಳು ಮೆರವಣಿಗೆ ವಿಶೇಷ ಮೆರುಗು ನೀಡಿದರು.
ತಂತ್ರಿ ಕೃಷ್ಣ ಭಟ್ ಗುರುವಾಯನಕೆರೆ ನೇತೃತ್ವದ ಅರ್ಚಕರು ವಿವಿಧ ಪೂಜಾ ವಿಧಿ ವಿಧಾನ ಮೂಲಕ ನೂತನ ಜೋಡಿ ಮಾಂಗಲ್ಯಧಾರಣೆ ನೆರವೇರಿಸಿದರು.
ಕ್ಲಬ್‍ನ ಸ್ಥಾಪಕಾಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕ ಮಾತನಾಡಿದರು. ಪಿ.ಎನ್. ಪ್ರಭಾಕರ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
—
ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಮತ್ತು ಜೆ.ಸಿ.ಐ.ಮಡಂತ್ಯಾರು ಇದರ ವತಿಯಿಂದ ಭಾನುವಾರ ನಡೆದ 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಮೆರವಣಿಗೆಯಲ್ಲಿ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ಟಿಬೆಟ್ ಮಾದರಿ ಗೊಂಬೆ ಕುಣಿತ ಆಕರ್ಷಕವಾಗಿತ್ತು.

