ಬಂಟ್ವಾಳ: ಸ್ತ್ರೀವಾದಿ ಸಾಹಿತ್ಯಗಳು ಪುರುಷ ದ್ವೇಷಿಯಾಗದೆ ಭಾರತೀಯ ಸಾಹಿತ್ಯದ ಪರಂಪರೆಯಲ್ಲಿ ಮುನ್ನಡೆಯಬೇಕು ಎಂದು ಉಪ್ಪಿನಂಗಡಿ ಪದವಿ ಕಾಲೇಜಿನ ಉಪನ್ಯಾಸಕಿ ರೇಶ್ಮಾ ಜಿ.ಭಟ್ ಹೇಳಿದರು.
ಅವರು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸರಕಾರಿ ಪ್ರೌಢ ಶಾಲೆ ಸರಪಾಡಿಯಲ್ಲಿ ಮಾ.2 ರಂದು ಏರ್ಯ ಚಂದ್ರಭಾಗಿ ರೈ ದತ್ತಿನಿಧಿ ಕಾರ್ಯಕ್ರಮದ ಅಂಗವಾಗಿ ಸಾಹಿತ್ಯ ಮತ್ತು ಮಹಿಳೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಅಕ್ಕಮಹಾದೇವಿಯನ್ನೊಳಗೊಂಡಂತೆ ಹಲವು ವಚನಾಕಾರ್ತಿಯರು ಮಹಿಳಾ ಸಾಹಿತಿಯಾಗಿ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದರು. ಜನಸಾಮಾನ್ಯ ಕವಯತ್ರಿಯರು ಕನ್ನಡ ಜಾನಪದ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದು ಮಹಿಳಾ ಸಾಹಿತಿಗಳ ಪರಂಪರೆಯ ಬಗ್ಗೆ ಉದಾಹರಿಸಿದರು.
ಮುಖ್ಯ ಅತಿಥಿಯಾಗಿ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಶಿಕ್ಷಕರು ಬೆಳೆಸಬೇಕು. ಶಾಲೆಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಬರೆಯುವ ಹವ್ಯಾಸವನ್ನು ಬೆಳೆಸಬಹುದು ಎಂದರು. ಮುಂದಿನ ಸಾಹಿತ್ಯ ಸಮ್ಮೇಳನ ಸರಪಾಡಿಯಲ್ಲಿ ಸಂಯೋಜನೆ ಮಾಡುವಂತೆ ವಿನಂತಿಸಿಕೊಂಡರು.
ಕ.ಸಾ.ಪ.ಅಧ್ಯಕ್ಷ ಕೆ.ಮೋಹನ ರಾವ್ ಅಧ್ಯಕ್ಷತೆವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಕನ್ನಡ ಭಾಷೆ ಉಳಿಯಬಹುದು. ಕನ್ನಡ ಭಾಷೆಯನ್ನು ನಮ್ಮ ಮಾತೃ ಭಾಷೆಯೊಂದಿಗೆ ವ್ಯವಹಾರ ಭಾಷೆಯಾಗಿ ಮಾತನಾಡಬೇಕು ಎಂದರು.
ನಿಕಟ ಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ ಪ್ರಸ್ತಾವನೆ ಗೈದು ತಾಲೂಕಿನಲ್ಲಿ ಹಿರಿಯ ಮಹಿಳಾ ಸಾಹಿತಿಯಾಗಿದ್ದ ಏರ್ಯ ಚಂದ್ರಭಾಗಿ ರೈ ಯವರ ಸಾಹಿತ್ಯದ ಕೊಡುಗೆಯ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಗೌರವಕಾರ್ಯದರ್ಶಿ ಬಿ.ತಮ್ಮಯ್ಯ, ಬಂಟ್ವಾಳ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಿರೀಶ ಭಟ್ ಅಜೆಕಲ ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಉದಯಕುಮಾರ್ ವಂದಿಸಿದರು. ಕನ್ನಡ ಶಿಕ್ಷಕಿ ವನಿತಾ ನಿರೂಪಿಸಿದರು.
