ಮೂಡುಬಿದಿರೆ: ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಭೌತಶಾಸ್ತ್ರ ವಿಭಾಗದ ವತಿಯಿಂದ `ಕಾಂಪ್ಯುಟೇಶನಲ್ ಫಿಸಿಕ್ಸ್’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆಗೊಂಡಿತು. ಬೆಂಗಳೂರಿನ ಇಂಟರ್ನ್ಯಾಶನಲ್ ಸೆಂಟರ್ ಫಾರ್ ಥಿಯೊರೆಟಿಕಲ್ ಸೈನ್ಸ್ಸ್ನ ಪ್ರೊ.ಅಭಿಷೇಕ್ ಧರ್ರವರು ವಿಚಾರಸಂಕಿರಣವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವೈ.ನಾರಾಯಣ ಮಾತನಾಡಿ, ಕಾಂಪ್ಯುಟೇಶನಲ್ ಫಿಸಿಕ್ಸ್ ಎಂಬುದು ಪ್ರಸ್ತುತ ದಿನಗಳಲ್ಲಿ ತುಂಬಾ ಮುಖ್ಯವೆನಿಸಿದ ವೈಜ್ಞಾನಿಕ ವಿಚಾರವಾಗಿದ್ದು, ಇತರೆ ಕ್ಷೇತ್ರಗಳ ಸಂಶೋಧಕರು, ಪರಿಣತರು ಕೂಡ ಇಂದು ಈ ವಿಧಾನವನ್ನು ಬಳಸುತ್ತಿದ್ದಾರೆ. ವಿಜ್ಞಾನದ ಪ್ರಮುಖ ಕ್ಷೇತ್ರಗಳಾದ ಖಗೋಳ ಶಾಸ್ತ್ರ, ನ್ಯಾನೋ ತಂತ್ರಜ್ಞಾನಗಳಲ್ಲಿ ಕಾಂಪ್ಯುಟೇಶನಲ್ ಫಿಸಿಕ್ಸ್ ತುಂಬಾ ಮುಖ್ಯವಾಗಿದ್ದು, ಇದನ್ನು ಭೌತಶಾಸ್ತ್ರದ ಮೂರನೇ ಆಯಾಮವೆಂದು ಪರಿಗಣಿಸಲಾಗುತ್ತಿದೆ ಎಂದರು.

ಮಾಹಿತಿಯ ಅವಶ್ಯಕತೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ನಾರಾಯಣ ಅವರು, ಮಾಹಿತಿ ಕ್ರೋಢೀಕರಣ ಸುಲಭದ ಕೆಲಸವಲ್ಲ. ಅದಕ್ಕಾಗಿ ಸಾಕಷ್ಟು ಸಂಶೋಧನೆ, ಪ್ರಯತ್ನಗಳ ಅವಶ್ಯಕತೆಯಿದೆ. ಉತ್ತಮ ಸಂಶೋಧನೆಗಳ ಮೂಲಕ ಮಾಹಿತಿಯ ಲಭ್ಯತೆಯನ್ನು ಹೆಚ್ಚಿಸುವ ಅವಶ್ಯಕತೆ ಇಂದು ಖಂಡಿತ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಮ್ಮ ಗ್ರಹಿಕೆಗಳು ಯಾವಾಗಲೂ ಭೌತಿಕ, ಅನುವಂಶೀಯ ಹಾಗೂ ಸಾಮಾಜಿಕ ಅಂಶಗಳಿಂದ ನಿಯಂತ್ರಿಸಲ್ಪಡುತ್ತವೆ. ಈ ನಿಯಂತ್ರಣವನ್ನು ದಾಟಿ ಮುಂದೆ ಹೋಗಲು ನಮ್ಮ ಕಲ್ಪನೆಗಳು ನಮಗೆ ಸಹಾಯ ಮಾಡಿದರೆ, ನಮ್ಮ ಕಲ್ಪನೆಗಳ ಪ್ರಕಾರ ವೈಜ್ಞಾನಿಕ ಚಿಂತನೆಗಳನ್ನು ಸಾಧಿಸಲು ಕಂಪ್ಯೂಟರ್ನಂತಹ ಯಂತ್ರಗಳು ಸಹಕರಿಸುತ್ತವೆ. ಇಂದು ಭೌತಶಾಸ್ತ್ರದ ಬಹುತೇಕ ಕ್ಷೇತ್ರಗಳು ಈ ಕಂಪ್ಯೂಟರ್ ತಂತ್ರಜ್ಞಾನದ ಮೇಲೆ ಆಧಾರಿತವಾಗಿದ್ದು, ಹೆಚ್ಚಿನ ವೈಜ್ಞಾನಿಕ ಅನ್ವೇಷಣೆಗೆ ದಾರಿ ಮಾಡಿಕೊಟ್ಟಿವೆ. ಕಾಂಪ್ಯುಟೇಶನಲ್ ಫಿಸಿಕ್ಸ್ ಅದ್ಭುತ ಅನ್ವೇಷಣೆಗಳನ್ನು ಸಾಧ್ಯವಾಗಿಸಿದೆ. ನಾವು ಯಾವಾಗಲೂ ನಮ್ಮ ಯೋಚನಾ ಲಹರಿಯನ್ನು ವಿಸ್ತಾರಗೊಳಿಸಿಕೊಳ್ಳಲು ಪ್ರಯತ್ನಿಸಬೇಕು. ಅದು ಹೆಚ್ಚಿನ ಸಾಧನೆಗೆ ಪೂರಕವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್ಐಟಿಕೆ ಸುರತ್ಕಲ್ನ ಪ್ರೊ. ಕಾರ್ತಿಕ್ ತರಫ್ದಾರ್, ರಾಷ್ಟ್ರೀಯ ವಿಚಾರ ಸಂಕಿರಣದ ಸಂಯೋಜಕ ಪ್ರೊ.ರಾಜೇಶ್ಕುಮಾರ್, ಸಹಸಂಯೋಜಕ ನವೀನ್ಕುಮಾರ್ ಉಪಸ್ಥಿತರಿದ್ದರು.
—
