ಮಂಗಳೂರು: ಯಕ್ಷಗಾನ ಕಲೆಯ ಹಿರಿಮೆ, ಗರಿಮೆ ಉಳಿಸುವ ಮಾದರಿ ಅರ್ಪಣಾ ಮನೋಭಾವದಲ್ಲಿ ತನ್ನನ್ನು ಕಲೆಗೆ ಸಮರ್ಪಿಸಿಕೊಂಡಿರುವ, ಶಬ್ದ ಛೇದಗಳಿಂದ ಮಿಂಚು ಮೂಡಿಸಬಲ್ಲ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಂತಹ ಶ್ರೇಷ್ಠ ಕಲಾವಿದರನ್ನು ಬಿರುದು ಪ್ರದಾನಿಸಿ ಸನ್ಮಾನಿಸಿ, ಗೌರವಿಸುವುದರಿಂದ ಸನ್ಮಾನಿಸುವವರಿಗೂ ಹಾಗೂ ಅದನ್ನು ಸ್ವೀಕರಿಸುವವರಿಗೂ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವೇದಮೂರ್ತಿ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ದೆಪ್ಪುಣಿಗುತ್ತು ದಿ.ಸದಾಶಿವ ಶೆಟ್ಟಿ ಹಾಗೂ ಮೇಗಿನಮನೆ ದಿ.ಜಯರಾಮ ನಾಯ್ಕ ಅವರ ಸೇವಾರ್ಥ ಬೊಂದೇಲ್‌ನಲ್ಲಿ ರಾಮಣ್ಣ ಶೆಟ್ಟಿ ಮುಗಿಪು ನೇತೃತ್ವದಲ್ಲಿ ಶನಿವಾರ ನಡೆದ ಸತಿ-ಶಕ್ತಿ ವಿಲಾಸ ಯಕ್ಷಗಾನ ಬಯಲಾಟ ಪ್ರದರ್ಶನದ ವೇದಿಕೆಯಲ್ಲಿ ಯಕ್ಷಗಾನ ತಾಳಮದ್ದಲೆ ಕ್ಷೇತ್ರದ ಸಾಧಕ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ ಸನ್ಮಾನ ಹಾಗೂ ಯಕ್ಷಾವ್ಯಯನಿಧಿ ಬಿರುದು ಪ್ರದಾನ ಸಮಾರಂಭದಲ್ಲಿ ಅಭಿನಂದನಾ ಭಾಷಣಗೈದು ಆಶೀರ್ವಚನ ನೀಡಿದರು.
ಕಲೆಯನ್ನು ಆರಾಧನೆ ಭಾವದಿಂದ ಕಂಡು, ಎಲ್ಲ ಪಾತ್ರಗಳನ್ನು, ಕೊಟ್ಟ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲ, ಸಂಕಷ್ಟಗಳನ್ನು ಸಮರ್ಪಕವಾಗಿ ಎದುರಿಸಬಲ್ಲ, ಸಾಮಾಜಿಕ, ಸಕಾಲಿಕ, ರಾಜಕೀಯ ವಿಷಯಗಳನ್ನು ಪಾತ್ರೋಚಿತವಾಗಿ, ಸಮಯೋಚಿತವಾಗಿ ಉಪಯೋಗಿಸುವ ಸಾಮರ್ಥ್ಯದ ಅಪರೂಪದ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಯಕ್ಷಗಾನ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅಪಾರ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಣ್ಣಂಬಳ ವಿಶ್ವೇಶ್ವರ ಭಟ್, ಕೆಲವು ಕಲಾವಿದರು ಸ್ವ ಪ್ರತಿಷ್ಟೆಗಾಗಿ ಅವರೇ ಸನ್ಮಾನ ಮಾಡಿಸಿಕೊಳ್ಳುವ ಈ ಕಾಲಘಟ್ಟದಲ್ಲಿ ನಾನು ಕೂಡ ಸನ್ಮಾನ ಸ್ವೀಕರಿಸುವುದು ಸರಿಯಲ್ಲ. ಆದರೆ ಮುಗಿಪು ರಾಮಣ್ಣ ಶೆಟ್ಟಿ ಕುಟುಂಬದೊಂದಿಗೆ ಹಲವು ವರ್ಷಗಳ ಒಡನಾಟದಲ್ಲಿರುವುದರಿಂದ ಹಾಗೂ ಅವರ ಸ್ವ ಪ್ರತಿಷ್ಠೆಗಾಗಿ ಈ ಸನ್ಮಾನವನ್ನು ಮಾಡದೆ, ನೈಜ ಕಲಾರಾಧನೆಯ ದೃಷ್ಟಿಯಿಂದ ಮಾಡುವುದರಿಂದ ನಾನು ಈ ಗೌರವಕ್ಕೆ ಒಪ್ಪಿಕೊಂಡೆ. ಯಕ್ಷಗಾನ, ತಾಳಮದ್ದಳೆ ಕ್ಷೇತ್ರದಲ್ಲಿ ನಾನು ಏನಾದರೂ ಸಾಧನೆ ಮಾಡಿದ್ದರೆ, ಅದು ನನ್ನ ಸಾಧನೆಯಲ್ಲ. ನನ್ನ ಸಹಕಲಾವಿದರ, ಸಂಘಟಕರ ಹಾಗೂ ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ ಬಿರುದು ಪ್ರದಾನ ಮಾಡಿದರು. ಮನೆಯಾಲ ರವಿರಾಜ ಸನ್ಮಾನ ಪತ್ರ ಓದಿದರು. ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ್ ಭಟ್, ಕೂಳೂರು ಬೀಡು ವಜ್ರಕುಮಾರ್ ಕರ್ಣಂತಾಯ ಬಲ್ಲಾಳ್ ಅತಿಥಿಗಳಾಗಿದ್ದರು. ಸುಣ್ಣಂಬಳ ವಿಶ್ವೇಶ್ವರ ಭಟ್ ಸನ್ಮಾನ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಮುಗಿಪು, ಸದಸ್ಯರಾದ ಕೆ.ಬಲರಾಜ ರೈ, ಡಾ.ಹರಿಕಿಶನ್ ನಾಯ್ಕ, ದೀಪಕ್ ಕಿರಣ್ ನಾಯ್ಕ, ಸಮೀರ್ ಎಸ್.ಶೆಟ್ಟಿ, ಶಿವದುರ್ಗಾ ಶೆಟ್ಟಿ ಉಪಸ್ಥಿತರಿದ್ದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.








