ಮೂಡುಬಿದಿರೆ: ಶಿಕ್ಷಕ ವೃತ್ತಿ ಗೌರವದ ವೃತ್ತಿಯಾಗಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಜಗತ್ತಿನ ಮುಂದೆ ಭಾರತವು `ಬಿಗ್ ಬಾಸ್’ ಆಗಬೇಕಾದರೆ ಶೈಕ್ಷಣಿಕವಾಗಿ ಪ್ರಗತಿಯಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಹಿಂದೆ ಉಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಶಿಕ್ಷಕರಿಂದಾಗಬೇಕು ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.

24-10

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ದ.ಕ ಜಿಲ್ಲಾ ಸಮಿತಿ ಹಾಗೂ ಮೂಡುಬಿದಿರೆ ವಲಯದ ಸಹಯೋಗದೊಂದಿಗೆ ಇಲ್ಲಿನ ಪದ್ಮಾವತಿ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ದ.ಕ ಜಿಲ್ಲಾ ಶೈಕ್ಷಣಿಕ ಮಹಾಸಮ್ಮೇಳನದ ಶೋಧ-2017ವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಎಲ್ಲಾ ರಂಗಗಳಲ್ಲಿಯೂ ಭ್ರಷ್ಟಾಚಾರವು ತುಂಬಿಕೊಂಡಿದ್ದು ಅದು ಶಿಕ್ಷಣ ಕ್ಷೇತ್ರವನ್ನೂ ಬಿಟ್ಟಿಲ್ಲ. ಆದರೆ ಶಿಕ್ಷಕರು ಭ್ರಷ್ಠಾಚಾರಿಗಳಾಗದೆ ವೃತ್ತಿಯ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಶಿಕ್ಷಕರಿಗೆ ಸಮಾಜ ಅಪಾರ ಅಪಾರ ಗೌರವವನ್ನು ನೀಡುತ್ತಿದ್ದು ಶಿಕ್ಷಕರೂ ಅದನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ ಅವರು ಶಿಕ್ಷಕರ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಹೇಳಿದರು

ದ.ಕ ಜಿ. ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಎಂ. ಆರ್ ರವಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ತೃಪ್ತಿಯ ವೃತ್ತಿ ಶಿಕ್ಷಕ ವೃತ್ತಿ. ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವ ಕೆಲಸ ಶಿಕ್ಷಕರಿಂದಾಗಬೇಕು. ಬೌದ್ಧಿಕ, ಮಾನಸಿಕ ಪ್ರತಿಭೆಯ ಶೋಧ ಶಿಕ್ಷಕರಿಂದಾಗಬೇಕು. ಕಲಿಕಾ ಶೋಧನೆ ಶಿಕ್ಷಕರದ್ದಾಗಬೇಕು. ಆದರೆ ಶೋಧ ಮತ್ತು ಶೋಧನೆಯಿಂದ ವಿದ್ಯಾರ್ಥಿಗಳಿಗೆ ಹಿಂಸೆಯಾಗಬಾರದು. ಸಮಾಜದ ಭಿನ್ನ ನೆಲೆಯಿಂದ ಬರುವ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಹಿನ್ನೆಲೆಯನ್ನು ನೋಡಬೇಕು. ಯಾವ ವಿದ್ಯಾರ್ಥಿಯನ್ನು ಅಲಕ್ಷ್ಯ ಮಾಡಬಾರದು.

ಶಿಕ್ಷಕರಿಗೆ ಉತ್ತಮ ಸ್ಥಾನಮಾನ ಬರಲು ಸಮಾಜವೂ ಕಾರಣವಾಗಿದ್ದು ಶಿಕ್ಷಕರ ಬಗ್ಗೆ ಸಮಾಜಕ್ಕಿರುವ ನಿರೀಕ್ಷೆಗಳನ್ನು ಹುಸಿ ಮಾಡಬಾರದು. ಭವಿಷ್ಯದಲ್ಲಿ ಡ್ರೈವರ್‍ಗಳಿಲ್ಲದ ಕಾರುಗಳ ಅವಿಷ್ಕಾರವಾಗಬಹುದು, ಕ್ಲಾಸ್‍ರೂಂನೊಳಗೆ ಶಿಕ್ಷಕರು ಅಗತ್ಯವಿಲ್ಲದ ದಿನಗಳೂ ಬರಬಹುದು. ಸಮಸ್ಯೆ ಸವಾಲುಗಳಿಲ್ಲದ ಕ್ಷೇತ್ರವೇ ಇಲ್ಲ. ಇದನ್ನು ಮೀರಿ ನಿಂತು ಯಶಸ್ಸು ಗಳಿಸಬೇಕು ಎಂದರು.

ಸವಣೂರು ವಿದ್ಯಾರಶ್ಮಿ ಮಹಾವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ “ಪ್ರಾಥಮಿಕ ಶಿಕ್ಷಣದ ಸವಾಲುಗಳು” ಎಂಬ ವಿಷಯದ ಕುರಿತು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ರೀತಿಯ ಸವಾಲುಗಳಿವೆ. ಶಿಕ್ಷಕರು ಸರಕಾರ, ಎಸ್‍ಡಿಎಂಸಿ, ಪೋಷಕರ, ಮಾಧ್ಯಮ ಮುಂತಾದವುಗಳಿಂದ ಸವಾಲುಗಳನ್ನು ಎದುರಿಸಬೇಕಾಗಿದೆ. ಶಿಸ್ತು, ಸಮಯಪಾಲನೆ, ಬದ್ಧತೆ ಹಾಗೂ ಸಿದ್ಧತೆಯಲ್ಲಿ ಶಿಕ್ಷಕರು ಹಿಂದೆ ಉಳಿದಿದ್ದಾರೆಂದು ಎಚ್ಚರಿಸಿದ ಅವರು ವಿದ್ಯಾರ್ಥಿಗಳ ಮನಸ್ಸನ್ನು ರೀಡ್ ಮಾಡುವ ಗುಣ ಶಿಕ್ಷಕರಲ್ಲಿದ್ದರೆ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಹೇಳಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್. ಸುವರ್ಣ, ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರಾಜಶ್ರೀ, ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಡಯಟ್‍ನ ವಿಷಯ ಪರಿವೀಕ್ಷಕ ಸಿಪ್ರಿಯನ್ ಮೊಂತೆರೋ, ಮೂಡುಬಿದಿರೆ ದೈಹಿಕ ಶಿಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ದ.ಕ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಮಕೃಷ್ಣ ಶಿರೂರು ಭಾಗವಹಿಸಿದ್ದರು. ಜಿಲ್ಲಾಧ್ಯಕ್ಷ ಶಿವಶಂಕರ ಭಟ್, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಜಿಲ್ಲಾ ಪ್ರಫುಲ್ಲಾ ಎಂ.ಶೆಟ್ಟಿ, ಕೋಶಾಧಿಕಾರಿ ನವೀನ್ ಪಿ.ಎಸ್, ರಾಜ್ಯ ಸಂಘದ ಸದಸ್ಯ ಕೆ ರಮೇಶ್ ನಾಯಕ್, ಮೂಡುಬಿದಿರೆ ವಲಯ ಅಧ್ಯಕ್ಷ ನಾಗೇಶ್ ಎಸ್ ಉಪಸ್ಥಿತರಿದ್ದರು. ರಾಜ್ಯ ಶಿಕ್ಷಕರ ಸಂಘದ ಸದಸ್ಯ ಕೆ.ರಮೇಶ್ ನಾಯಕ್ ಸ್ವಾಗತಿಸಿದರು. ಶಿವಪ್ರಸಾದ್ ರೈ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು. ಜಗದೀಶ್ ಶೆಟ್ಟಿ ವಂದಿಸಿದರು.

By suddi9

Leave a Reply

Your email address will not be published. Required fields are marked *